ಸಾಂದರ್ಭಿಕ ಚಿತ್ರ 
ದೇಶ

ಇಬ್ಬರು ಸಹೋದ್ಯೋಗಿಗಳನ್ನು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮ*ತ್ಯೆ ಮಾಡಿಕೊಂಡ ಸಿಆರ್​ಪಿಎಫ್ ಯೋಧ | CRPF jawan

ಗುವಾಹಟಿ: ಅಸ್ಸಾಂನ ನಾಗಾಂವ್ ಜಿಲ್ಲೆಯ ಮಿಲಿಟರಿ ಶಿಬಿರದಲ್ಲಿ ಮಂಗಳವಾರ(ಆ. 04) ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧನೊಬ್ಬ(CRPF jawan) ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಅದೇ ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಕಟಿಮರಿಯ 34 ಬೆಟಾಲಿಯನ್ ಶಿಬಿರದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮುಖ್ಯ ದ್ವಾರದಲ್ಲಿ ನಿಯೋಜನೆಗೊಂಡಿದ್ದ ಎಎಸ್​ಐ ಬಲ್ಲಾನಿ ಪ್ರೇಮಬರಮ್ ಎಂಬ ಯೋಧ, ತನ್ನ ಸಹೋದ್ಯೋಗಿಗಳಾದ ವಿಷ್ಣು ಪ್ರಸಾದ್ ಬಾಘೇಲ್ ಮತ್ತು ರಾಮನವಾಲ್ ಸಿಂಗ್ ಯಾದವ್ ಎಂಬ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಅವರು ತಕ್ಷಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಎಎಸ್‌ಐ ಮಾನೆ ಗೋವಿಂದ್ ಶ್ರೀಪುಲ್ ಮೇಲೆ ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂಲತಃ ಆಂಧ್ರಪ್ರದೇಶದ ನಿವಾಸಿಯಾಗಿರುವ ಎಎಸ್‌ಐ ಪ್ರೇಮಬರಮ್ ಘಟನೆ ಬಳಿಕ ಬ್ಯಾರಕ್‌ನೊಳಗೆ ಹೋಗಿ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.
ಈ ಕುರಿತು ಮಾತನಾಡಿರುವ ನಾಗಾಂವ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರೋತಿಮ್ ದಾಸ್, ಪ್ರೇಮಬರಮ್ ಶಿಬಿರದ ಮುಖ್ಯ ದ್ವಾರದಲ್ಲಿ ಕರ್ತವ್ಯದಲ್ಲಿರುವಾಗ ತಮ್ಮ ಸರ್ವಿಸ್ ರೈಫಲ್ ಅನ್ನು ಹೊತ್ತೊಯ್ಯುತ್ತಿರಲಿಲ್ಲ. ಗಾರ್ಡ್ ರೂಮಿನಿಂದ INSAS ರೈಫಲ್ ತೆಗೆದುಕೊಂಡು ಕ್ವಾರ್ಟರ್ ಗಾರ್ಡ್‌ನ ಹಿಂಭಾಗಕ್ಕೆ ಹೋಗಿ ಅಲ್ಲಿಂದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಬ್ಯಾರಕ್ ಒಳಗೆ ಹೋಗಿ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಹಿರಿಯ ಸಿಆರ್‌ಪಿಎಫ್ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಗುಂಡಿನ ದಾಳಿಯ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).