ಸಿಆರ್​ಪಿಎಫ್​ ಸೈನಿಕರಿಂದ ಬಿಜೆಪಿ ಪರ ಪ್ರಚಾರದ ಆರೋಪ 
ದೇಶ

BJP ಪರ CRPF ಪ್ರಚಾರ: TMC ಯಿಂದ ಗಂಭೀರ ಆರೋಪ; ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದ ಡೆರೆಕ್ ಒ'ಬ್ರೇನ್! DerekO'Brien

ಪ್ರಮುಖ ಮುಖ್ಯಾಂಶಗಳು

  • ರಂಗೇರಿದ ಪಶ್ಚಿಮ ಬಂಗಾಳ ಚುನಾವಣೆ
  • ಸಿಆರ್​ಪಿಎಫ್​ ಸೈನಿಕರಿಂದ ಬಿಜೆಪಿ ಪರ ಪ್ರಚಾರದ ಆರೋಪ
  • ಚುನಾವಣಾ ಆಯೋಗಕ್ಕೆ ಪತ್ರ ಬರೆದ ಡೆರೆಕ್ ಒ'ಬ್ರೇನ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ ಈ ಮಧ್ಯೆ, ಕೇಂದ್ರ ಪಡೆಗಳ ನಡೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ಕರ್ತವ್ಯದಲ್ಲಿರುವ ಸಿಆರ್‌ಪಿಎಫ್ (CRPF) ಸಿಬ್ಬಂದಿ ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (TMC) ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ (DerekO'Brien) ಅವರು ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವೈರಲ್ ವಿಡಿಯೋ ತಂದ ಬಿರುಗಾಳಿ!

ಈ ಇಡೀ ವಿವಾದಕ್ಕೆ ಮೂಲ ಕಾರಣ ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋ. ಟಿಎಂಸಿ ನೀಡಿರುವ ದೂರಿನ ಪ್ರಕಾರ, ಆ ವಿಡಿಯೋದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಬಿಜೆಪಿ ಅಭ್ಯರ್ಥಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಬಿಜೆಪಿ ಪರವಾಗಿ ಕರಪತ್ರಗಳನ್ನು ಹಂಚುತ್ತಾ, ಮತದಾರರು ಕಮಲದ ಗುರುತಿಗೆ ಮತ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ ಎಂಬುದು ಟಿಎಂಸಿಯ ಪ್ರಮುಖ ಆರೋಪ.
ಒಬ್ಬ ಭದ್ರತಾ ಸಿಬ್ಬಂದಿ ಹೀಗೆ ಒಂದು ರಾಜಕೀಯ ಪಕ್ಷದ ಏಜೆಂಟ್‌ನಂತೆ ವರ್ತಿಸುವುದು ಚುನಾವಣಾ ಅಕ್ರಮ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆ ಎಂದು ಡೆರೆಕ್ ಒ'ಬ್ರೇನ್ ಗುಡುಗಿದ್ದಾರೆ.

ನಿಯಮಗಳ ಉಲ್ಲಂಘನೆ: ಟಿಎಂಸಿ ವಾದವೇನು?

ತಮ್ಮ ಪತ್ರದಲ್ಲಿ ಡೆರೆಕ್ ಅವರು ಕೇವಲ ಆರೋಪಗಳನ್ನಷ್ಟೇ ಮಾಡಿಲ್ಲ, ಕಾನೂನು ನಿಬಂಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕೇಂದ್ರ ಪಡೆಗಳು ಸಂಪೂರ್ಣ ತಟಸ್ಥವಾಗಿರಬೇಕು. ಆದರೆ ಇಲ್ಲಿ ಸಿಬ್ಬಂದಿ ಒಂದು ಪಕ್ಷದ ಪರ ನಿಂತಿರುವುದು ಸ್ಪಷ್ಟ ನಿಯಮಬಾಹಿರವಾಗಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ 1951 ರ ಸೆಕ್ಷನ್ 123 ಮತ್ತು 129 ರ ಅಡಿಯಲ್ಲಿ ಯಾವುದೇ ಸರ್ಕಾರಿ ಅಥವಾ ಭದ್ರತಾ ಸಿಬ್ಬಂದಿ ಮತದಾರರ ಮೇಲೆ ಪ್ರಭಾವ ಬೀರುವಂತಿಲ್ಲ.ಭಾರತೀಯ ದಂಡ ಸಂಹಿತೆ (BNS) ಹೊಸ ಕಾನೂನಿನ ಅಡಿಯಲ್ಲಿ ಇದು ಕ್ರಿಮಿನಲ್ ಬೆದರಿಕೆ ಮತ್ತು ಚುನಾವಣಾ ಅಕ್ರಮದ ವ್ಯಾಪ್ತಿಗೆ ಬರುತ್ತದೆ ಎನ್ನುವುದು ಟಿಎಂಸಿ ವಾದವಾಗಿದೆ.
ಸಮವಸ್ತ್ರ ಧರಿಸಿದ ವ್ಯಕ್ತಿ ಬಂದು ಒಂದು ಪಕ್ಷಕ್ಕೆ ಮತ ಹಾಕಿ ಅಂದಾಗ ಮತದಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕೊಡಲಿ ಪೆಟ್ಟು, ಎಂಬುದು ಟಿಎಂಸಿಯ ಆತಂಕ.

ತಕ್ಷಣದ ಕ್ರಮಕ್ಕೆ ಆಗ್ರಹ

ಈ ಪ್ರಕರಣವನ್ನು ಇಲ್ಲಿಗೇ ಬಿಡದ ಟಿಎಂಸಿ, ಚುನಾವಣಾ ಆಯೋಗಕ್ಕೆ ಕಠಿಣ ಬೇಡಿಕೆಗಳನ್ನು ಇಟ್ಟಿದೆ. ಸಂಬಂಧಪಟ್ಟ ಸಿಆರ್‌ಪಿಎಫ್ ಸಿಬ್ಬಂದಿಗೆ ತಕ್ಷಣವೇ ಶೋ-ಕಾಸ್ ನೋಟಿಸ್ ನೀಡಬೇಕು. ಘಟನೆಗೆ ಕಾರಣರಾದವರ ಮೇಲೆ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಪಶ್ಚಿಮ ಬಂಗಾಳದಾದ್ಯಂತ ನಿಯೋಜನೆಗೊಂಡಿರುವ ಎಲ್ಲಾ ಕೇಂದ್ರ ಪಡೆಗಳಿಗೆ ತಟಸ್ಥವಾಗಿರಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಪತ್ರದದಲ್ಲಿ ನಮೂದಿಸಿದೆ, (ಏಜನ್ಸೀಸ್​).