ತಂಗಿಯ ಕಣ್ಣಿನ ಶಸ್ತ್ರಚಿಕಿತ್ಸೆಗೆ ಜನರಿಂದಲೇ ಹಣ! ವೈರಲ್​ ಮನವಿಯ ಹಿಂದಿದ್ದ ಅಣ್ಣನ ಅಸಲಿ ಮುಖ ಬಯಲು  
ದೇಶ

ತಂಗಿಯ ಕಣ್ಣಿನ ಶಸ್ತ್ರಚಿಕಿತ್ಸೆಗೆ ಜನರಿಂದಲೇ ಹಣ! ವೈರಲ್​ ಮನವಿಯ ಹಿಂದಿದ್ದ ಅಣ್ಣನ ಅಸಲಿ ಮುಖ ಬಯಲು | Crowdfunding

ದಯವಿಟ್ಟು ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಈತ ಹಾಕಿದ ಪೋಸ್ಟ್​ಗೆ ಅನೇಕರು ಹೆಚ್ಚು ಯೋಚಿಸದೆ ತಕ್ಷಣವೇ ಸಹಾಯ ಮಾಡಿದರು. ಆದರೆ, ಈತ ಆಸ್ಪತ್ರೆಯ ಹೆಸರು ಮತ್ತು ತಂಗಿಯ ಬಗ್ಗೆ ಉಲ್ಲೇಖಿಸಿದ್ದ ಮಾಹಿತಿ ಕ್ಷಣಮಾತ್ರದಲ್ಲಿ ವೈರಲ್ ಆದ ಬೆನ್ನಲ್ಲೇ ಈತನ ಉದ್ದೇಶದ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿತು.

ಉತ್ತರ ಪ್ರದೇಶ: ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಅನುಕಂಪ ಹಾಗೂ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ಲಕ್ಷಾಂತರ ರೂ. ಹಣವನ್ನು ಕೇವಲ 24 ಗಂಟೆಯೊಳಗೆ ಲೂಟಿ ಹೊಡೆದ ವ್ಯಕ್ತಿಯ ಅಸಲಿ ಮುಖ ಕೊನೆಗೂ ಕಳಚಿ ಬಿದ್ದಿದೆ.

ಬಂಧಿತ ಆರೋಪಿಯನ್ನು ಅಜಯ್‌ವೀರ್ ಸಿಂಗ್ ಅಲಿಯಾಸ್ ಜೈ ಸಿಂಗ್ ರಾಥೋಡ್ ಎಂದು ಗುರುತಿಸಲಾಗಿದೆ. ತನ್ನ 16 ವರ್ಷದ ತಂಗಿ ಅಪರೂಪದ ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ದೃಷ್ಟಿ ಉಳಿಸಲು ತುರ್ತು ಶಸ್ತ್ರಚಿಕಿತ್ಸೆಗೆ ಹಣದ ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಈತ ಹಾಕಿದ ಪೋಸ್ಟ್​ಗೆ ಅನೇಕರು ಹೆಚ್ಚು ಯೋಚಿಸದೆ ತಕ್ಷಣವೇ ಸಹಾಯ ಮಾಡಿದರು. ಆದರೆ, ಈತ ಆಸ್ಪತ್ರೆಯ ಹೆಸರು ಮತ್ತು ತಂಗಿಯ ಬಗ್ಗೆ ಉಲ್ಲೇಖಿಸಿದ್ದ ಮಾಹಿತಿ ಕ್ಷಣಮಾತ್ರದಲ್ಲಿ ವೈರಲ್ ಆದ ಬೆನ್ನಲ್ಲೇ ಈತನ ಉದ್ದೇಶದ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿತು.

ತಂಗಿ ಬದುಕೇ ಇಲ್ಲ!

ಆರೋಪಿ ಅಜಯ್‌ವೀರ್ ಸಿಂಗ್, ದೆಹಲಿಯ ಪ್ರಸಿದ್ಧ ಶ್ರಾಫ್ ಐ ಸೆಂಟರ್ ಆಸ್ಪತ್ರೆಯ ಲೆಟರ್‌ಹೆಡ್, ಪ್ರಿಸ್ಕ್ರಿಪ್ಷನ್ ಹಾಗೂ ಚಿಕಿತ್ಸಾ ವೆಚ್ಚದ ಅಂದಾಜು ಪತ್ರಗಳನ್ನು ನಕಲು ಮಾಡಿ. ತನ್ನ ಕುಟುಂಬ ಈಗಾಗಲೇ 2.5 ಲಕ್ಷ ರೂ. ಖರ್ಚು ಮಾಡಿದೆ. ಇನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗೆ 1.2 ಲಕ್ಷ ಹಣದ ಅಗತ್ಯವಿದೆ ಎಂದು ಉಲ್ಲೇಖಿಸಿದ್ದ. ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಹಲವು ದಾನಿಗಳು ನೆರವಿನ ಹಸ್ತ ನೀಡಿದರು. ಕೇವಲ 24 ಗಂಟೆಗಳಲ್ಲಿ ಈತನ ಬ್ಯಾಂಕ್ ಖಾತೆಗೆ 1,58,282 ರೂಪಾಯಿ ಹಣ ಬಂದು ಬಿದ್ದಿತ್ತು. ಕೂಡಲೇ ಲಿಂಕ್‌ಗಳನ್ನು ಡಿಲೀಟ್ ಮಾಡಿ, ಈಗಾಗಲೇ ಸಾಕಷ್ಟು ಹಣ ಬಂದಿದೆ ಎಂದು ನಂಬಿಸಿದ.

ಆಸ್ಪತ್ರೆಯಿಂದ ಕಟ್ಟುಕಥೆ ರಿವೀಲ್​

ತಮ್ಮ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೈದ್ಯಕೀಯ ದಾಖಲೆಗಳನ್ನು ಬಳಸಿ ಜಾಲತಾಣಗಳು ಹಾಗೂ ವಾಟ್ಸ್​ಆ್ಯಪ್‌ನಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿತು. ಅಸಲಿಗೆ ತಂಗಿಯ ಕಣ್ಣಿನ ಚಿಕಿತ್ಸೆಗೆಂದು ಹೇಳಿರುವ ಆರೋಪಿಯ ಸಹೋದರಿ ಮೃತಪಟ್ಟು ವರ್ಷಗಳೇ ಕಳೆದಿವೆ ಎಂಬ ಸ್ಫೋಟಕ ಸಂಗತಿ ದಾನಿಗಳನ್ನು ಅಕ್ಷರಶಃ ಬೆಚ್ಚಿಬೀಳಿಸಿತು.

ಖಾಕಿ ಅಲರ್ಟ್​

ಮೃತ ತಂಗಿಯ ಹೆಸರಿನಲ್ಲಿ ಹಣ ಕೇಳಿದ ವ್ಯಕ್ತಿಯ ಅಸಲಿ ಮುಖವಾಡವನ್ನು ಕಳಚಿದ ಆಸ್ಪತ್ರೆಯ ಪೋಸ್ಟ್​ ಅನ್ನು ಕಂಡು ಕುಪಿತಗೊಂಡ ದಾನಿಗಳು, ಆರೋಪಿಯಿಂದ ತಮ್ಮ ಹಣ ವಾಪಾಸ್​ ಬರಬೇಕು ಎಂದು ಸ್ಕ್ರೀನ್​ಶಾಟ್​ಗಳನ್ನು ಹಂಚಿಕೊಂಡಿದ್ದಾರೆ. ಇನ್ನು, ಕೆಲವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣವೇ ಆರೋಪಿ ಅಜಯ್‌ವೀರ್ ಸಿಂಗ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈತ ಸಂಗ್ರಹಿಸಿದ ಹಣದ ಮೂಲ ಹಾಗೂ ವಂಚನೆಯ ಸಂಪೂರ್ಣ ಜಾಲದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).