ದೇಶದ ಶೇ.45 ಸಿಎಂಗಳ ವಿರುದ್ಧ ಕ್ರಿಮಿನಲ್ ಕೇಸ್ 
ದೇಶ

ದೇಶದ ಶೇ.45 ಸಿಎಂಗಳ ವಿರುದ್ಧ ಕ್ರಿಮಿನಲ್ ಕೇಸ್! ರೇವಂತ್-ಸುವೇಂದು ಮೇಲೆ ಅತಿಹೆಚ್ಚು ಪ್ರಕರಣ

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ದೇಶದ 31 ಮುಖ್ಯಮಂತ್ರಿಗಳ ಪೈಕಿ 14 ಸಿಎಂಗಳು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಶೇ.45ರಷ್ಟು ಸಿಎಂಗಳ ವಿರುದ್ಧ ಕೆಲವು ಗಂಭೀರ ಪ್ರಕರಣ ಒಳಗೊಂಡಂತೆ ನೂರಾರು ಕ್ರಿಮಿನಲ್ ಕೇಸ್​ಗಳು ಬಾಕಿ ಇವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್​ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆ ಗಳು ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳು ತೀರಾ ಇತ್ತೀಚಿನ ಚುನಾವಣೆಗಳ ವೇಳೆ ಸಲ್ಲಿಸಿರುವ ಅಫಿಡವಿಟ್​ಗಳ ಪರಿಶೀಲನೆಯಿಂದ ಅವರ ವಿರುದ್ಧದ ಆರೋಪ ಪ್ರಕರಣಗಳು, ಅವರ ಆಸ್ತಿ-ಪಾಸ್ತಿ, ಶೈಕ್ಷಣಿಕ ಅರ್ಹತೆ ಮುಂತಾದ ವಿವರಗಳು ದಾಖಲಾಗಿವೆ. ಸೋಮವಾರ (ಜುಲೈ 27) ಈ ವರದಿ ಬಿಡುಗಡೆ ಮಾಡಲಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ 89 ಕ್ರಿಮಿನಲ್ ಪ್ರಕರಣಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಸುವೇಂದು ಅಧಿಕಾರಿ (29) ಹಾಗೂ ಡಿ.ಕೆ. ಶಿವಕುಮಾರ್ (19) ನಂತರದ ಎರಡು ಸ್ಥಾನಗಳಲ್ಲಿದ್ದಾರೆ. ಸುವೇಂದು ಮತ್ತು ಶಿವಕುಮಾರ್ ಅಲ್ಲದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಐಪಿಸಿ ಸೆಕ್ಷನ್ 307ರಡಿ ಬರುವ ಕೊಲೆ ಪ್ರಯತ್ನದಂಥ ಅತ್ಯಂತ ಗಂಭೀರ ಆರೋಪವನ್ನೂ ಎದುರಿಸುತ್ತಿದ್ದಾರೆ. ಭಗವಂತ ಮಾನ್ (ಪಂಜಾಬ್), ಪಿ.ಎಸ್. ತಮಾಂಗ್ (ಸಿಕ್ಕಿಂ), ಮೋಹನ್ ಚರಣ್ ಮಾಝಿ (ಒಡಿಶಾ) ಮತ್ತು ಭಜನ್ ಲಾಲ್ ಶಮಾ (ರಾಜಸ್ಥಾನ) ತಲಾ ಒಂದು ಕ್ರಿಮಿನಲ್ ಕೇಸ್​ಗಳನ್ನು ಎದುರಿಸುತ್ತಿದ್ದು ಕೊನೆಯ ಸ್ಥಾನದಲ್ಲಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಸಿಎಂ ಡಿ.ಕೆ.ಶಿವಕುಮಾರ್

ಮುವತ್ತೊಂದು ಸಿಎಂಗಳ ಸರಾಸರಿ ಘೋಷಿತ ಆಸ್ತಿ 118.07 ಕೋಟಿ ರೂ. ಆಗಿದ್ದು ನಾಲ್ವರು ಮುಖ್ಯಮಂತ್ರಿಗಳು ತಾವು 100 ಕೋಟಿ ರೂ. ಮೌಲ್ಯಕ್ಕೂ ಅಧಿಕ ಆಸ್ತಿಪಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ಡಿ.ಕೆ.ಶಿವಕುಮಾರ್ ಅತ್ಯಂತ ಶ್ರೀಮಂತ ಸಿಎಂ ಆಗಿದ್ದು ಅವರ ಘೋಷಿತ ಆದಾಯ 1,413 ಕೋಟಿ ರೂ. ಆಗಿದೆ. 931 ಕೋಟಿ ರೂ. ಆದಾಯದ ಆಂಧ್ರಪ್ರದೇಶ ಸಿಎಂ ನಾಯ್ಡು ಎರಡನೇ ಸ್ಥಾನದಲ್ಲಿದ್ದಾರೆ. ತಮಿಳುನಾಡು ಸಿಎಂ ಸಿ. ವಿಜಯ್ ಜೋಸೆಫ್ (648 ಕೋ. ರೂ.) ಮತ್ತು ಅರುಣಾಚಲ ಪ್ರದೇಶದ ಪೇಮಾ ಖಂಡು (332 ಕೋ. ರೂ.) ಶ್ರೀಮಂತಿಕೆಯಲ್ಲಿ ನಂತರದ ಸ್ಥಾನ ಪಡೆದಿದ್ದಾರೆ. ವರದಿ ಪ್ರಕಾರ, ಸುವೇಂದು (85.87 ಲಕ್ಷ ರೂ.) ಹಾಗೂ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ (55.24 ಲಕ್ಷ ರೂ.) ‘ಬಡ’ ಮುಖ್ಯಮಂತ್ರಿಗಳು.

ಏಕೈಕ ಮಹಿಳೆ

ದೆಹಲಿಯ ರೇಖಾ ಗುಪ್ತಾ ಪ್ರಸ್ತುತ ಭಾರತದ ಏಕೈಕ ಮಹಿಳಾ ಸಿಎಂ ಆಗಿದ್ದಾರೆ.