ರಾಹುಲ್​ ಗಾಂಧಿ! 
ದೇಶ

ಚುನಾವಣಾ ಆಯೋಗದ ವಿವಾದ: ಪ್ರತಿಯೊಬ್ಬರೂ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ರಾಹುಲ್​ ಗಾಂಧಿ! | Rahul Gandhi

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿಗೊಳಿಸಿದ್ದು, ಇದರ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿಗೊಳಿಸಿದ್ದು, ಇದರ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅವರು, ಫಾರ್ಮ್ 6 ಅನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಜೊತೆಗೆ ಮುಖ್ಯ ಚುನಾವಣಾ ಆಯುಕ್ತರು ಕೂಡ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ ನೆರಳಿನಲ್ಲಿ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದಿರುವ ರಾಹುಲ್​, ಚುನಾವಣಾ ಆಯೋಗದ ಮುಖ್ಯಸ್ಥರು ಫಾರ್ಮ್ 6 ಅನ್ನು ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ಬದಲಾಯಿಸಿದ್ದಾರೆ ಎಂಬುದು ಈಗಾಗಲೇ ಸ್ಥಾಪಿತವಾದ ಸತ್ಯ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಸಿಇಸಿ ಅಮಾನತು ಅರ್ಜಿ: ಕೇವಲ ವರದಿ ಆಧರಿಸಿ ಆದೇಶ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್, ಆಯೋಗಕ್ಕೆ ನೋಟಿಸ್! | Supreme Court

ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಅನುಮೋದನೆಯಿಲ್ಲದೆ ಕುಮಾರ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾದ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದ ಬೆನ್ನಲ್ಲೇ ರಾಹುಲ್​ ಗಾಂಧಿ ಕಡೆಯಿಂದ ಈ ಹೇಳಿಕೆಗಳು ಬಂದಿವೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌‌ಮಾಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠ ಈ ನೋಟೀಸ್ ಜಾರಿ ಮಾಡಿದೆ.

ನ್ಯಾಯಾಲಯದಲ್ಲಿ ನಡೆದಿದ್ದೇನು..?

ಅರ್ಜಿದಾರರಾದ ಶೈಲೇಂದ್ರ ಮಣಿ ತ್ರಿಪಾಠಿ, ರಾಕೇಶ್ ಕುಮಾರ್ ಸಿಂಗ್ ಮತ್ತು ಸುಧಾಕರ್ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ಚುನಾವಣಾ ಆಯೋಗವು ಬಹುಸದಸ್ಯರ ಸಂಸ್ಥೆಯಾಗಿದ್ದು, ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಬೇಕು. ಹಾಗೆಯೇ ಪ್ರಕರಣದ ವಿಚಾರಣೆ ಬಾಕಿ ಇರುವವರೆಗೆ ಸಿಇಸಿಯನ್ನು ಅಮಾನತುಗೊಳಿಸುವ ಮಧ್ಯಂತರ ಆದೇಶವನ್ನು ನೀಡಬೇಕೆಂದು ಮತ್ತು ನಿರ್ಧಾರಗಳನ್ನು ಸರ್ವಾನುಮತದಿಂದ ಅಥವಾ ಕನಿಷ್ಠ ಬಹುಮತದಿಂದ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಸಿಂಗ್ ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಸಿಇಸಿ ಮೇಲಿನ ಆರೋಪಗಳೆಲ್ಲವೂ ಬರೀ ಮಾಧ್ಯಮದ ಸುದ್ದಿಗಳ ಆಧಾರದ ಮೇಲೆ ಇವೆ. ಈ ಸುದ್ದಿಗಳು ಸಂಪೂರ್ಣವಾಗಿ ನಿಜವಿರಬಹುದು ಅಥವಾ ಅರ್ಧ ಮಾತ್ರ ನಿಜವಿರಬಹುದು ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಯ ಮೂಲಕ ಈ ವರದಿಗಳನ್ನು ನಿರಾಕರಿಸಿಲ್ಲ ಎಂದು ತಿಳಿಸಿದರು.

ಚುನಾವಣಾ ಆಯೋಗದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ಈಗಾಗಲೇ ಪ್ರತ್ಯೇಕ ಕಾನೂನು ಇದೆ ಎಂದ ನ್ಯಾಯಾಲಯ, ಅದನ್ನು ಸರಿಯಾಗಿ ಪಾಲಿಸಲಾಗುತ್ತಿದೆ ಮತ್ತು ಮುಂದೆಯೂ ಪಾಲಿಸಲ್ಪಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿತು. ಕೇವಲ ಸುದ್ದಿ ವರದಿಗಳ ಆಧಾರದ ಮೇಲೆ ತಕ್ಷಣಕ್ಕೆ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಮುಂದಿನ 10 ದಿನಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವೇನೂ ಆಗುವುದಿಲ್ಲವೆಂದೂ, ಒಂದು ವೇಳೆ ಯಾವುದಾದರೂ ನಿರ್ಧಾರಗಳು ತಪ್ಪಾಗಿ ತೆಗೆದುಕೊಂಡಿರುವುದು ಸಾಬೀತಾದರೆ ನಂತರ ಅದನ್ನು ರದ್ದುಗೊಳಿಸುವುದಾಗಿ ತಿಳಿಸಿತು. ಅಲ್ಲದೆ, ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಇಸಿಐ ಹಾಗೂ ಮೂವರು ಚುನಾವಣಾ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ.

ಅರ್ಜಿಯಲ್ಲಿ, ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಕೆಲಸ ಮಾಡದಂತೆ ತಡೆಯಬೇಕು. ಆ ಸಮಯದಲ್ಲಿ ಆಯೋಗದ ಕೆಲಸಗಳನ್ನು ಉಳಿದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಒಮ್ಮತದ ನಿರ್ಧಾರದ ಮೇರೆಗೆ ನಡೆಸಬೇಕು. ಅಲ್ಲದೆ, ಒಂದು ವೇಳೆ ಆ ಸ್ಥಾನ ಖಾಲಿಯಾದರೆ, ಆ ಹುದ್ದೆಗೆ ಹೊಸಬರ ನೇಮಕಾತಿಯನ್ನು ದೇಶದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ಮಾತ್ರ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಹಲ್​ಚಲ್​ ಎಬ್ಬಿಸಿದ್ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ!

ಕಳೆದ 10 ತಿಂಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಗಮನಕ್ಕೆ ತರದೆ ಅಥವಾ ಶಿಫಾರಸು ಪಡೆಯದೆ ಏಕಪಕ್ಷೀಯವಾಗಿ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 25 ರಂದು ವರದಿ ಮಾಡಿತ್ತು.

ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಯಾವುದೇ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಚರ್ಚೆಗಳು ಸಾಮಾನ್ಯ. ನಮ್ಮ ಎಲ್ಲ ಆದೇಶಗಳು ಕಾನೂನುಬದ್ಧವಾಗಿಯೇ ಇವೆ ಮತ್ತು ಸರಿಯಾದ ನಿಯಮಗಳ ಪ್ರಕಾರವೇ ನಡೆದಿವೆ ಎಂದು ಸಮರ್ಥಿಸಿಕೊಂಡಿದೆ(ಏಜೆನ್ಸೀಸ್​).