ಕಾರ್ಪೆರೇಟ್ ಜಗತ್ತು ಕಾಲಕಾಲಕ್ಕೆ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಸಹಜ ಪ್ರಕ್ರಿಯೆ. ಮೊದಲು ಉದ್ಯೋಗಕ್ಕಾಗಿ ಕೌಶಲ ಮತ್ತು ಬುದ್ಧಿಮತ್ತೆಯನ್ನು ಪರಿಗಣಿಸಲಾಗುತ್ತಿತ್ತು. ಆದರೆ, ಬದಲಾಗಿರುವ ಪರಿಸ್ಥಿತಿಯಲ್ಲಿ ಕಂಪನಿಗಳು ಇಐ ಅಂದರೆ ಎಮೋಷನಲ್ ಇಂಟಲಿಜೆನ್ಸ್ಗೆ ಆದ್ಯತೆ ನೀಡುತ್ತಿದ್ದು, ತಂಡದ ನಾಯಕರಾಗುವವರಲ್ಲಿ ಮತ್ತು ಇತರ ಜವಾಬ್ದಾರಿ ನಿರ್ವಹಿಸುವವರಲ್ಲಿ ಭಾವನಾತ್ಮಕ ಬುದ್ಧಿವಂತಿಕೆ ಅಗತ್ಯ ಎಂದು ಹೇಳುತ್ತಿವೆ. ಈ ನಿಟ್ಟಿನಲ್ಲಿ ನೇಮಕಾತಿ ಮಾದರಿಯನ್ನೇ ಬದಲಿಸಿವೆ ಮತ್ತು ಸೂಕ್ತ ತರಬೇತಿಯನ್ನು ನೀಡುತ್ತಿವೆ. ಇಐ ಕೌಶಲ ಹೆಚ್ಚಿದಷ್ಟು ಕೆಲಸದ ಸ್ಥಳವು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಸಂತೋಷದಾಯಕವಾಗಿರುತ್ತದೆ ಎಂಬುದನ್ನು ಅಧ್ಯಯನಗಳೂ ಸ್ಪಷ್ಟಪಡಿಸಿವೆ.
ಕೃತಕ ಬುದ್ಧಿಮತ್ತೆ (ಎಐ) ಕೆಲಸದ ಮತ್ತು ಕೆಲಸದ ಸ್ಥಳದ ಸ್ವರೂಪ, ವಾತಾವರಣವನ್ನು ಬದಲಿಸಿದೆ. ಎಐ ಮುಖಾಂತರ ಉತ್ಪಾದಕತೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿರುವುದು ಹೌದಾದರೂ, ಈ ಯಂತ್ರಗಳನ್ನು, ಸಾಫ್ಟ್ವೇರ್ಗಳನ್ನು ಮನುಷ್ಯರೇ ನಿರ್ವಹಿಸಬೇಕು. ಮನುಷ್ಯ ಮೂಲತಃ ಭಾವಜೀವಿ. ಕಾರ್ಯಸ್ಥಳದಲ್ಲಿಯೂ ಭಾವನೆಗಳಿಗೆ ಅದರದ್ದೇ ಆದ ಪ್ರಾಮುಖ್ಯವಿದೆ. ಈ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುವ ಉದ್ಯಮಗಳು ಸೋಲುತ್ತಿವೆ ಮತ್ತು ಬಿಜಿನೆಸ್ ಸ್ಕಿಲ್ ಹೊಂದಿರುವ ಉದ್ಯಮಿಗಳು ಭಾವನಾತ್ಮಕ ಬುದ್ಧಿವಂತಿಕೆ ಅರ್ಥ ಮಾಡಿಕೊಳ್ಳದೆ ಸೋಲು ಅನುಭವಿಸುತ್ತಿದ್ದಾರೆ ಅಥವಾ ಕಂಪನಿಯನ್ನು ನಡೆಸಲು ಹೆಣಗಾಡುತ್ತಿದ್ದಾರೆ.
ತಂಡಸ್ಪೂರ್ತಿ ಇಲ್ಲದಿರುವುದು, ಉತ್ಪಾದಕತೆಯ ವೇಗ ತಗ್ಗುವುದು, ಅಪನಂಬಿಕೆ ಹೆಚ್ಚುವುದು... ಇದಕ್ಕೆಲ್ಲ ಭಾವನಾತ್ಮಕ ಬುದ್ಧಿವಂತಿಕೆ ಕೊರತೆಯೇ ಕಾರಣ. ಎಐಯನ್ನು ಎಷ್ಟೇ ಪರಿಣಾಮಕಾರಿಯಾಗಿ ಅಳವಡಿಸಿದರೂ, ಇಐ ಅಳವಡಿಸಿಕೊಳ್ಳದಿದ್ದರೆ ಯಶಸ್ಸು ಸಾಧ್ಯವಿಲ್ಲ ಎಂಬ ಸಂಗತಿ ಕಾಪೋರೇಟ್ ಜಗತ್ತಿಗೆ ಸ್ಪಷ್ಟವಾಗಿ ಅರಿವಾಗಿದೆ. ಮೊದಲೆಲ್ಲ, ಉದ್ಯಮ ನಡೆಸಲು ಬಿಜಿನೆಸ್ ಸ್ಕಿಲ್ಗಳಿದ್ದರೆ ಸಾಕು ಎಂಬಂಥ ಸ್ಥಿತಿ ಇತ್ತು. ಈಗ ಹಾಗಲ್ಲ, ಭಾವನಾತ್ಮಕ ಕೌಶಲಗಳಿಗೆ ಮನ್ನಣೆ ದೊರೆಯುತ್ತಿದೆ. ಎಐಗಳು ಯಾಂತ್ರಿಕ ಕಾರ್ಯವನ್ನು ಸುಲಭವಾಗಿಸಿದ್ದರೂ, ತಂಡಸ್ಪೂರ್ತಿ, ಬಾಂಧವ್ಯಗಳ ರಕ್ಷಣೆ, ಸವಾಲುಗಳ ನಿರ್ವಹಣೆ, ಮಾನವೀಯ ಸಂವಾದ/ಚರ್ಚೆಯಂಥ ಸಾಮರ್ಥ್ಯಗಳು ಸಂಪೂರ್ಣವಾಗಿ ಮನುಷ್ಯನ ಮೇಲೆ/ಭಾವನೆಗಳ ಮೇಲೆ ಅವಲಂಬಿತವಾಗಿವೆ. ಮನುಷ್ಯರೊಂದಿಗೆ ಬಾಂಧವ್ಯ ಸಾಧಿಸುವ, ಮನುಷ್ಯರನ್ನು ಅರ್ಥಮಾಡಿಕೊಳ್ಳುವ ಗುಣವೇ ಭಾವನಾತ್ಮಕ ಬುದ್ಧಿವಂತಿಕೆ. ಮತ್ತು ಈ ಭಾವನೆಗಳನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸುವುದು ಸಹ ಅಷ್ಟೇ ಮುಖ್ಯ.
ಪ್ರಾಮುಖ್ಯ ಸಂಪರ್ಕ ಸುಧಾರಣೆ: ಭಾವನಾತ್ಮಕ ಬುದ್ಧಿವಂತಿಕೆ ಹೊಂದಿರುವ ಸಿಬ್ಬಂದಿಯು ಸಂಸ್ಥೆಯ ಆಸ್ತಿ. ಅವರು ಉತ್ತಮ ಸಂಪರ್ಕಕಾರರು ಮತ್ತು ಸಂವಹನಕಾರರು. ಇದರಿಂದ ತಂಡದಲ್ಲಿ ಸಹಕಾರ ಹೆಚ್ಚುವ ಮೂಲಕ ಉತ್ಪಾದಕತೆ ಬೆಳೆಯುತ್ತದೆ.
ನಾಯಕತ್ವ ನಿರ್ವಹಣೆ: ನಾಯಕರು ಸ್ವಯಂ-ಜಾಗೃತಿ ಮತ್ತು ಒತ್ತಡ ನಿರ್ವಹಣೆಯ ಮೂಲಕ ತಂಡಗಳನ್ನು ಪ್ರೇರೇಪಿಸುತ್ತಾರೆ. ಉದ್ಯಮದ ಯಶಸ್ಸಿನ 58%ಗೆ ಭಾವನಾತ್ಮಕ ಬುದ್ಧಿವಂತಿಕೆ ಕಾರಣವಾಗಿದೆ ಎನ್ನುತ್ತವೆ ಸಮೀಕ್ಷಾ ವರದಿಗಳು.
ಸಂಘರ್ಷ ನಿವಾರಣೆ: ಭಾವನೆಗಳ ಸರಿಯಾದ ನಿರ್ವಹಣೆಯಿಂದ ಸಂಘರ್ಷಗಳು ಕಡಿಮೆಯಾಗುತ್ತವೆ. ಈ ಮೂಲಕ ತಂಡದ ಉತ್ಸಾಹ ಬೆಳೆದು ಉತ್ಪಾದಕತೆ ಏರುಮುಖವಾಗುತ್ತದೆ.
ಬಾಂಧವ್ಯ ನಿರ್ಮಾಣ: ಇಐ ಸಹಕಾರದ ಬಾಂಧವ್ಯ ಬೆಳೆಸಿ, ಉತ್ತಮ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಅದು ಕೆಲಸದಲ್ಲಿ ಒಟ್ಟಾರೆ ಯಶಸ್ಸಿಗೆ ಅಗತ್ಯ. ಇಐನ ಪರಿಣಾಮಕಾರಿ ಅಳವಡಿಕೆಯಿಂದ ಈ ಯಶಸ್ಸಿನ ಸೂತ್ರಗಳನ್ನು ಸಾಧಿಸಬಹುದು.
1. ತಂಡದ ಸದಸ್ಯರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು.
2. ಕ್ಲಿಷ್ಟಕರ ಸನ್ನಿವೇಶಗಳನ್ನು ಶಾಂತವಾಗಿ ಎದುರಿಸುವುದು.
3. ಪ್ರಾಜೆಕ್ಟ್ ವಿಳಂಬವಾಗುತ್ತಿದ್ದರೆ ಅದಕ್ಕೆ ಸಕಾರಣ ಪತ್ತೆ ಹಚ್ಚಿ, ತೊಂದರೆಯನ್ನು ನಿವಾರಿಸುವುದು.
4. ತಂಡದ ಸದಸ್ಯರನ್ನು ಹುರಿದುಂಬಿಸುವುದು, ಅವರ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದು.
5. ಯಶಸ್ಸು/ಸಾಧನೆಯ ಶ್ರೇಯವನ್ನು ತಂಡದ ಸದಸ್ಯರಿಗೆ ಸಮರ್ಪಿಸುವುದು.
6. ಒಳಜಗಳಗಳಿಗೆ ಆಸ್ಪದವಿಲ್ಲದೆ, ತಂಡವನ್ನು ಯಶಸ್ವಿಯಾಗಿ ನಡೆಸುವುದು.
7. ಒಂದೊಮ್ಮೆ, ವೈಫಲ್ಯ ಎದುರಾದರೂ ನಿಂದಿಸದೆ ಮುಂದಿನ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ತಂಡವನ್ನು ಸನ್ನದ್ಧಗೊಳಿಸುವುದು.
ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಒಂದೊಮ್ಮೆ ಭಾವನೆ ವ್ಯಕ್ತಪಡಿಸಲು ಕಷ್ಟವಾಗುತ್ತಿದ್ದರೆ, ಯಾವ ಅಂಶ ತಡೆಯಾಗುತ್ತಿದೆ ಎಂಬುದನ್ನು ಅವಲೋಕಿಸಿ. ಬೇರೆಯವರ ಸಲಹೆ, ಅಭಿಪ್ರಾಯ ಕೇಳಲು ಹಿಂಜರಿಯದಿರಿ. ಮಾನವೀಯ ಸಂಬಂಧಗಳನ್ನು ಗೌರವಿಸಿ ಮತ್ತು ಅದನ್ನು ಇನ್ನಷ್ಟು ಬಲಿಷ್ಠಗೊಳಿಸಿ. ಯೋಗ ಮತ್ತು ಧ್ಯಾನ ದಿನಚರಿಯ ಭಾಗವಾಗಿರಲಿ. ಮತ್ತೊಬ್ಬರ ಭಾವನೆಗಳನ್ನು ಗೌರವಿಸಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿ.
ಕಠಿಣ ಸನ್ನಿವೇಶಗಳಲ್ಲಿ ಶಾಂತವಾಗಿರಿ. ಪ್ರತೀ ಸಣ್ಣ ಗೆಲುವನ್ನೂ ಆನಂದಿಸಿ ಮತ್ತು ಆಚರಿಸಿ. ಈ ಮೂಲಕ ಸ್ವಂತ ಬೆಳವಣಿಗೆಯನ್ನು ಅವಲೋಕಿಸಿ. ಮತ್ತೊಬ್ಬರ ಗೆಲುವನ್ನೂ ಸಂಭ್ರಮಿಸಿ.
ಸ್ವಯಂ-ಜಾಗೃತಿ/ಅರಿವು
ಸ್ವಯಂ-ನಿಯಂತ್ರಣ
ಪ್ರೇರಣೆ
ಸಹಾನುಭೂತಿ
ಸಾಮಾಜಿಕ ಕೌಶಲಗಳು
ತಂಡದ ಪ್ರದರ್ಶನ, ನಿರ್ಣಯಗಳನ್ನು ಕೈಗೊಳ್ಳುವ ಕ್ಷಮತೆ ಮತ್ತು ನೇತೃತ್ವದ ಮೇಲೆ ಭಾವನಾತ್ಮಕ ಬುದ್ಧಿವಂತಿಕೆಯ ನೇರ ಪರಿಣಾಮ ಕಂಡುಬರುತ್ತದೆ. ಉಚ್ಚ ಭಾವನಾತ್ಮಕ ಬುದ್ಧಿವಂತಿಕೆಯ ಕೌಶಲ ಹೊಂದಿರುವವರು ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ತಂಡವನ್ನು ಸ್ಥಿರವಾಗಿ ಇರಿಸುತ್ತಾರೆ ಮತ್ತು ತಂಡದೊಳಗಿನ ಸಂಬಂಧ/ಬಾಂಧವ್ಯಗಳನ್ನು ರಕ್ಷಿಸುತ್ತಾರೆ. ನೇಮಕಾತಿ ಸಂದರ್ಶನಗಳಲ್ಲಿ ಮೊದಲು ಟೆಕ್ನಿಕಲ್ ಸ್ಕಿಲ್ಗಳ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಅದರಲ್ಲೂ ಕೋವಿಡ್ ಕಾಲಘಟ್ಟದ ನಂತರ ನೇಮಕಾತಿ ಸಂದರ್ಶನಗಳಲ್ಲಿ, ‘ಒತ್ತಡದ ಸಂದರ್ಭದಲ್ಲಿ ನೀವು ಹೇಗೆ ಇರುತ್ತೀರಿ?’, ‘ಒತ್ತಡ ನಿರ್ವಹಣೆಗೆ ಯಾವ ಉಪಾಯಗಳನ್ನು ಅನುಸರಿಸುತ್ತೀರಿ?’, ‘ಕಠೋರವಾದ ಸಹೋದ್ಯೋಗಿ ಅಥವಾ ಮೇಲಧಿಕಾರಿಯನ್ನು ಹೇಗೆ ಹ್ಯಾಂಡಲ್ ಮಾಡುತ್ತೀರಿ?’ ‘ತಪು್ಪ ಮಾಡಿದ ಬಳಿಕ ಅಥವಾ ತಪು್ಪ ಕಂಡ ಬಳಿಕ ನಿಮ್ಮ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ?’ ಎಂಬ ಪ್ರಶ್ನೆಗಳ ಮೂಲಕ ಭಾವನಾತ್ಮಕ ಕೌಶಲಗಳನ್ನು ಅಳೆಯಲಾಗುತ್ತಿದೆ.
ಮಾನವ ಸಂಪನ್ಮೂಲ ವಿಭಾಗದವರು (ಎಚ್ಆರ್) ರೇಜ್ಯುಮ್ (ಪರಿಚಯ ಪತ್ರ) ಪರಿಶೀಲನೆಗಿಂತ ಭಾವನಾತ್ಮಕ ಸ್ಥಿರತೆ, ಸಹಯೋಗ/ಸಹಕಾರದ ಭಾವ, ಅನುಕಂಪದ ಗುಣಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ, ಸಹಕಾರ ಭಾವ, ಅನುಕಂಪ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣದಂಥ ಕೌಶಲಗಳಿಗೆ ಬೇಡಿಕೆ ಹೆಚ್ಚಲಿದೆ. ಸ್ವಂತ ಭಾವನೆಗಳನ್ನು ಸರಿಯಾಗಿ ನಿರ್ವಹಿಸುವ ಮತ್ತು ತಂಡದ ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಉದ್ಯೋಗಿಗಳಿಗೆ ಕಾಪೋರೇಟ್ ವಲಯದಲ್ಲಿ ಬೇಡಿಕೆ ಹೆಚ್ಚುತ್ತಿದೆ.
ಭಾವನಾತ್ಮಕ ಬುದ್ಧಿವಂತಿಕೆ ಹೊಂದಿರುವ ಸಿಬ್ಬಂದಿಯ ನೇಮಕಾತಿ ಮತ್ತು ಉಳಿದ ಸಿಬ್ಬಂದಿಗೆ ಈ ಕುರಿತಂತೆ ಅಗತ್ಯ ತರಬೇತಿ ನೀಡಿದ ಬಳಿಕ ಕಂಪನಿ ಅಥವಾ ಆಯಾ ಉದ್ಯಮದ ನಿರ್ವಹಣೆ ಉತ್ತಮವಾಗಿರುವುದಕ್ಕೆ ಹಲವು ನಿದರ್ಶನಗಳಿವೆ.
ಕಂಪನಿಗಳು 2024-2025ರಲ್ಲಿ ಇಐ ಅನ್ನು ಎಐ ಅಳವಡಿಕೆ, ಹೈಬ್ರಿಡ್ ಮಾದರಿ ಕೆಲಸ (ವಾರದಲ್ಲಿ ಕೆಲ ದಿನ ಮನೆಯಿಂದ ಮತ್ತು ಕೆಲ ದಿನ ಆಫೀಸಿನಲ್ಲಿ ಕೆಲಸ ಮಾಡುವ ವಿಧಾನ) ಮತ್ತು ಮಾನಸಿಕ ಆರೋಗ್ಯಕ್ಕೆ ಸಂಯೋಜಿಸಿ ಅಳವಡಿಸಿಕೊಳ್ಳುತ್ತಿವೆ. 75% ಫಾರ್ಚುನ್ 500 ಕಂಪನಿಗಳು ಇಐ ತರಬೇತಿ ಸಾಧನಗಳನ್ನು ಬಳಸುತ್ತಿವೆ.
ವರ್ಷದಿಂದ ವರ್ಷಕ್ಕೆ ಭಾವನಾತ್ಮಕ ಕೌಶಲಗಳಿಗೆ ಬೇಡಿಕೆ ಹೆಚ್ಚಲಿದೆ. 2030ರ ಹೊತ್ತಿಗೆ ಇದು ಶೇಕಡ 22-26ರಷ್ಟು ಏರಿಕೆ ಕಾಣಲಿದೆ ಎನ್ನುತ್ತಾರೆ ಕ್ಷೇತ್ರತಜ್ಞರು.
ಎಮೋಷನಲ್ ಇಂಟಲಿಜೆನ್ಸ್ (ಇಐ) ಎಂದರೆ ಸ್ವಂತ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ನಿರ್ವಹಿಸುವುದು ಮತ್ತು ಇತರರ ಭಾವನೆಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವ ಸಾಮರ್ಥ್ಯ. ಉದ್ಯೋಗ ರಂಗದಲ್ಲಿ ಇಐ ಮುಖ್ಯವಾಗಿದ್ದು, ಅದು ವೈಯಕ್ತಿಕ ಮತ್ತು ಸಂಸ್ಥಾತ್ಮಕ ಯಶಸ್ಸಿಗೆ ಚಾಲಕಶಕ್ತಿ. 2025ರಲ್ಲಿ, ಕೃಕ ಬುದ್ಧಿಮತ್ತೆ (ಎಐ) ಬಳಕೆಯ ಹೆಚ್ಚಳ ಹಾಗೂ ಹೈಬ್ರಿಡ್ ಮಾದರಿ ಕೆಲಸದ ಹಿನ್ನೆಲೆಯಲ್ಲಿ ಇಐ ಇನ್ನಷ್ಟು ಪ್ರಮುಖವಾಗುತ್ತಿದೆ, ಏಕೆಂದರೆ ಅದು ಮಾನವೀಯ ಕೌಶಲಗಳನ್ನು ಗಟ್ಟಿಗೊಳಿಸಿ ತಂತ್ರಜ್ಞಾನದ ಸವಾಲುಗಳನ್ನು ನಿಭಾಯಿಸುತ್ತದೆ.