INDIA Bloc > ರಾಹುಲ್ ಗಾಂಧಿ ನಡೆಗೆ ಸಿಪಿಐ(ಎಂ) ಆತ್ಮಾವಲೋಕನದ ಪಾಠ
INDIA Bloc: ಕೇರಳದಲ್ಲಿ ಎಡಪಕ್ಷಗಳ ವಿರುದ್ಧ ಕಾಂಗ್ರೆಸ್ ನಾಯಕತ್ವದ ಧೋರಣೆಯನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಬಹಿರಂಗವಾಗಿ ಪ್ರಶ್ನಿಸಿದ್ದು, ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಒಳಗಿನ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಮುಂಚೂಣಿಗೆ ಬಂದಿವೆ.
ಕೇರಳದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೈ ನಾಯಕರು ನೀಡಿದ್ದ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೇಬಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ (LDF) ಮೈತ್ರಿಕೂಟವು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಸರಣಿ ಆರೋಪಗಳನ್ನು ಮಾಡಿದ್ದರು ಎಂದು ನೆನಪಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳು ನೆಪವಾಗಬಾರದು
ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ತಮಗೆ ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದನ್ನು ಎಂ ಎ ಬೇಬಿ ತೀವ್ರವಾಗಿ ಖಂಡಿಸಿದ್ದು, ರಾಜಕೀಯವಾಗಿ ವಿರೋಧಿಯಾಗಿದ್ದರೂ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಅಪ್ಪಿಕೊಂಡಿದ್ದನ್ನು ಅವರು ಈ ವೇಳೆ ಉಲ್ಲೇಖಿಸಿದ್ದಾರೆ. ವಿವಿಧ ಪಕ್ಷಗಳ ನಡುವೆ ಇಂತಹ ಸೌಜನ್ಯದ ನಡವಳಿಕೆಗಳು ಸಾಧ್ಯವಿರುವಾಗ, ರಾಷ್ಟ್ರಮಟ್ಟದ ಮೈತ್ರಿಕೂಟದ ಭಾಗವಾಗಿರುವ ನಾಯಕರೊಂದಿಗೆ ಅಂತರ ಕಾಯ್ದುಕೊಳ್ಳಲು ರಾಜಕೀಯ ಭಿನ್ನಾಭಿಪ್ರಾಯಗಳನ್ನು ನೆಪವಾಗಿ ಬಳಸುವುದು ಸರಿಯಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಿಣರಾಯಿ ವಿಜಯನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಕ್ಕೂ ಸಿಪಿಐ(ಎಂ) ನಾಯಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಒಂದಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಮೈತ್ರಿಕೂಟದ ಪಕ್ಷಗಳ ನಾಯಕರೇ, ರಾಜ್ಯಮಟ್ಟದಲ್ಲಿ ಪರಸ್ಪರ ಇಂತಹ ಗಂಭೀರ ಆರೋಪಗಳನ್ನು ಮಾಡಿಕೊಳ್ಳುತ್ತಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ. ವಿರೋಧ ಪಕ್ಷಗಳ ಒಗ್ಗಟ್ಟನ್ನು ಬಲಪಡಿಸಬೇಕಾದರೆ ಇಂಡಿಯಾ ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಬೇಬಿ ಒತ್ತಿ ಹೇಳಿದ್ದಾರೆ.
ರಾಜ್ಯಮಟ್ಟದ ಭಿನ್ನಾಭಿಪ್ರಾಯಗಳು ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವ ಮೈತ್ರಿಕೂಟದ ದೊಡ್ಡ ಗುರಿಯನ್ನು ದುರ್ಬಲಗೊಳಿಸದಂತೆ ಪ್ರತಿಯೊಂದು ಪಕ್ಷವೂ ತನ್ನ ನಡವಳಿಕೆ ಮತ್ತು ಮಾತುಗಳನ್ನು ನಿಯಂತ್ರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಜೂನ್ 8 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪ್ರಮುಖ ಸಭೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸುಮಾರು 25 ಪ್ರತಿಪಕ್ಷಗಳ 50 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ ಬಿಜೆಪಿಗೆ ವಿರುದ್ಧವಾಗಿ ಒಗ್ಗಟ್ಟಿನ ಪ್ರದರ್ಶನ ನೀಡಲು ಪ್ರಯತ್ನಿಸಲಾಗಿದ್ದರೂ, ಎಂ.ಎ. ಬೇಬಿ ಅವರ ಈ ಇತ್ತೀಚಿನ ಹೇಳಿಕೆಗಳು ಮೈತ್ರಿಕೂಟದ ಪ್ರಮುಖ ಸದಸ್ಯರ ನಡುವೆ ಇನ್ನೂ ಮುಂದುವರಿದಿರುವ ಆಂತರಿಕ ಅಸಮಾಧಾನ ಮತ್ತು ಉದ್ವಿಗ್ನತೆಯನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದೆ(ಏಜೆನ್ಸೀಸ್).