ಟಿಎಂಸಿ ತೊರೆದು ಕಮಲ ಪಾಳಯ ಸೇರಿದ ಸುಷ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್
- ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ!
- ಟಿಎಂಸಿ ತೊರೆದು ಕಮಲ ಪಾಳಯ ಸೇರಿದ ಸುಷ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್
- 57 ಶಾಸಕರ ಬಂಡಾಯದ ಬೆನ್ನಲ್ಲೇ ಬಿಜೆಪಿ ಸೇರಿದ ಟಿಎಂಸಿಯ ಮೂವರು ಘಟಾನುಘಟಿ ಸಂಸದರು
ಕೋಲ್ಕತ: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಈಗ ಮತ್ತೊಂದು ಚೇತರಿಸಿಕೊಳ್ಳಲಾಗದ ಬಿಗ್ ಶಾಕ್ ತಗುಲಿದೆ. ಟಿಎಂಸಿ ಪಕ್ಷದ ಪ್ರಮುಖ ಪಿಲ್ಲರ್‌ಗಳಂತಿದ್ದ ಮೂವರು ಮಾಜಿ ರಾಜ್ಯಸಭಾ ಸಂಸದರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (TMC MPs Joins BJP) ಸೇರ್ಪಡೆಯಾಗಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಸುಷ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ಕೇಸರಿ ಧ್ವಜ ಹಿಡಿದಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಈ ಮೂವರು ನಾಯಕರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಟಿಎಂಸಿಯಲ್ಲಿ ಈಗ ಓಪನ್ ಬಂಡಾಯ!
2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋತ ಬೆನ್ನಲ್ಲೇ ಪಕ್ಷದೊಳಗೆ ಹೊಗೆಯಾಡುತ್ತಿದ್ದ ಅಸಮಾಧಾನ ಈಗ ಜ್ವಾಲಾಮುಖಿಯಾಗಿ ಸ್ಫೋಟಿಸಿದೆ. ಶಾಸಕ ಋತಬ್ರತಾ ಬ್ಯಾನರ್ಜಿ ಬರೋಬ್ಬರಿ 57 ಶಾಸಕರ ಬೆಂಬಲದೊಂದಿಗೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದಾಗಿನಿಂದ ಟಿಎಂಸಿ ಕೋಟೆಯಲ್ಲಿ ಬಿರುಕು ಮೂಡಿತ್ತು. ವಿಧಾನಸಭೆಯಿಂದ ಆರಂಭವಾದ ಈ ದಂಗೆ ಈಗ ಸಂಸತ್ತಿನ ಎರಡೂ ಸದನಗಳಿಗೂ ಹಬ್ಬಿದೆ. ಈಗ ಈ ಮೂವರು ಪ್ರಭಾವಿ ಸಂಸದರು ಬಿಜೆಪಿ ಸೇರಿರುವುದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಮತಾ ಕಥೆ ಮುಗೀತು: ನಾಯಕರ ಆಕ್ರೋಶ
ಬಿಜೆಪಿ ಸೇರಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ನಾಯಕರು ಮಮತಾ ಬ್ಯಾನರ್ಜಿ ಮತ್ತು ಅವರ ಆಡಳಿತ ವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಂಗಾಳದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಮಹಿಳೆಯರ ಮೇಲಿನ ದಬ್ಬಾಳಿಕೆಗೆ ಕೊನೆಯೇ ಇಲ್ಲದಂತಾಗಿದೆ. ಅದಕ್ಕೇ ಬಂಗಾಳದ ಜನ ಟಿಎಂಸಿಯನ್ನು ತಿರಸ್ಕರಿಸಿದ್ದಾರೆ. ಇನ್ನು ಮುಂದೆ ಮಮತಾ ಬ್ಯಾನರ್ಜಿ ಕಥೆ ಮುಗಿದ ಅಧ್ಯಾಯ, ಅವರ ಪಕ್ಷವೂ ಮುಗಿದು ಹೋಗಿದೆ ಎಂದು ಸುಖೇಂದು ಶೇಖರ್ ರೇ ಗುಡುಗಿದ್ದಾರೆ. ತಾವು ರಾಜ್ಯಸಭಾ ಸೀಟಿಗಾಗಿ ಬಿಜೆಪಿ ಸೇರಿಲ್ಲ, ನನಗೆ ಒಂದೇ ಬಾರಿಗೆ ಎರಡು ದೋಣಿಗಳಲ್ಲಿ ಪ್ರಯಾಣ ಮಾಡಲು ಇಷ್ಟವಿರಲಿಲ್ಲ. ಅದಕ್ಕೇ ಟಿಎಂಸಿ ಬಿಟ್ಟು ಬಂದೆ ಎಂದು ಸುಷ್ಮಿತಾ ದೇವ್ ಮಾರ್ಮಿಕವಾಗಿ ನುಡಿದಿದ್ದಾರೆ.
ಬಲಗೊಂಡ ಕೇಸರಿ ಪಡೆ: ಸಮಿಕ್ ಭಟ್ಟಾಚಾರ್ಯ
ಮಾಜಿ ಸಂಸದರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮಾತನಾಡಿ, ಈ ಮೂವರು ಅನುಭವಿ ನಾಯಕರ ಸೇರ್ಪಡೆಯಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಲಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಇಡೀ ಬಿಜೆಪಿ ಕುಟುಂಬ ಇವರನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತದೆ ಎಂದಿದ್ದಾರೆ,(ಏಜನ್ಸೀಸ್).