ಇಂಡಿಯಾ ಒಕ್ಕೂಟದಲ್ಲಿ ಬಿರುಕು? ಬಂಗಾಳವನ್ನ ಬಿಜೆಪಿಗೆ ಧಾರೆ ಎರೆಯುತ್ತಿದ್ದಾರಾ ಮಮತಾ? ರಾಹುಲ್ ಗಾಂಧಿ ಬಿಚ್ಚಿಟ್ಟ ರಹಸ್ಯವೇನು?
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಹಳೆ ಮಿತ್ರರ ನಡುವೆಯೇ ಯುದ್ಧ ಘೋಷಣೆಯಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಹಿಂದೆಂದೂ ಕಾಣದ ರೀತಿಯಲ್ಲಿ ಕಿಡಿಕಾರಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಕೆಂಪು ಹಾಸು ಹಾಸಿಕೊಡುತ್ತಿದೆ ಎಂದು ರಾಹುಲ್ ನೇರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ-ಟಿಎಂಸಿ ನಡುವೆ 'ಭ್ರಷ್ಟಾಚಾರದ ಜಿದ್ದಾಜಿದ್ದಿ'
ಈ ಬಗ್ಗೆ ಮಂಗಳವಾರ ರಾಯ್‌ಗಂಜ್‌ನಲ್ಲಿ ನಡೆದ ಬೃಹತ್ ಱಲಿಯಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಬ್ಬರನ್ನೂ ಭ್ರಷ್ಟಾಚಾರದ ವಿಷಯದಲ್ಲಿ ಸಮಾನವಾಗಿ ಗುರಿ ಮಾಡಿದರು. ನರೇಂದ್ರ ಮೋದಿ ಭ್ರಷ್ಟ ಎಂಬುದು ಜಗತ್ತಿಗೇ ಗೊತ್ತು, ಆದರೆ ಭ್ರಷ್ಟಾಚಾರದ ಈ ರೇಸ್‌ನಲ್ಲಿ ತೃಣಮೂಲ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಂಗಾಳವನ್ನು ಕಾಡುತ್ತಿರುವ ಪ್ರಮುಖ ಹಗರಣಗಳ ಅಂಕಿಅಂಶಗಳನ್ನು ನೀಡಿದ ಅವರು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶಾರದಾ ಚಿಟ್ ಫಂಡ್ ಹಗರಣ: ಸುಮಾರು 17 ಲಕ್ಷ ಹೂಡಿಕೆದಾರರ ₹1,900 ಕೋಟಿ ಹಣ ಇನ್ನೂ ಪಾವತಿಯಾಗಿಲ್ಲ.
ರೋಸ್ ವ್ಯಾಲಿ ಹಗರಣ: ₹6,600 ಕೋಟಿ ಮೊತ್ತದ ಬೃಹತ್ ಹಗರಣದಲ್ಲಿ 31 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ಬೀದಿಗೆ ಬಿದ್ದಿದ್ದಾರೆ.
ಅಕ್ರಮ ಗಣಿಗಾರಿಕೆ: ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ಟಿಎಂಸಿ ನಾಯಕರು ನೇರವಾಗಿ ಭಾಗಿಯಾಗಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ನಿರುದ್ಯೋಗ ಮತ್ತು ಸುಳ್ಳು ಭರವಸೆಗಳ ಸುರಿಮಳೆ
2021ರ ಚುನಾವಣಾ ಭರವಸೆಗಳನ್ನು ಪ್ರಸ್ತಾಪಿಸಿದ ರಾಹುಲ್, ಟಿಎಂಸಿಯ ಆಡಳಿತ ವೈಫಲ್ಯವನ್ನು ಅಂಕಿಅಂಶಗಳ ಸಮೇತ ತೆರೆದಿಟ್ಟರು.
ಒಂದೆಡೆ ಐದು ಲಕ್ಷ ಉದ್ಯೋಗ ನೀಡುವುದಾಗಿ ಟಿಎಂಸಿ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ 84 ಲಕ್ಷ ಯುವಕರು ನಿರುದ್ಯೋಗ ಭತ್ಯೆಗಾಗಿ ಕಾದು ಕುಳಿತಿದ್ದಾರೆ. ಪಶ್ಚಿಮ ಬಂಗಾಳದ ಜನತೆಗೆ ದ್ರೋಹ ಬಗೆಯಲಾಗುತ್ತಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಸಿಂಡಿಕೇಟ್ ರಾಜ್ ಯುವಕರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿದೆ ಮತ್ತು ಕೇವಲ ಆಡಳಿತ ಪಕ್ಷದ ಆಪ್ತರಿಗೆ ಮಾತ್ರ ಲಾಭವಾಗುತ್ತಿದೆ ಎಂಬುದು ರಾಹುಲ್ ಗಾಂಧಿಯವರ ಪ್ರಬಲ ವಾದವಾಗಿತ್ತು.
ಕಾನೂನು ಸುವ್ಯವಸ್ಥೆ ಮತ್ತು ಆರ್.ಜಿ ಕರ್ ಪ್ರಕರಣದ ಉಲ್ಲೇಖ
ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ, ಇತ್ತೀಚಿನ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಬಂಗಾಳದಲ್ಲಿ ಟಿಎಂಸಿ ಗೂಂಡಾಗಳು ತಮಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷದ ನಾಯಕರು ಹಿಂಸಾಚಾರದಲ್ಲಿ ನಂಬಿಕೆ ಇಟ್ಟಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಶಾಂತಿಯುತ ಮತ್ತು ಪಾರದರ್ಶಕ ರಾಜಕಾರಣವನ್ನು ಬಯಸುತ್ತದೆ ಎಂದರು.
ರಾಜಕೀಯ ಲೆಕ್ಕಾಚಾರ: ಕಾಂಗ್ರೆಸ್‌ನ ಮರುಜನ್ಮದ ಪ್ರಯತ್ನ?
ರಾಹುಲ್ ಗಾಂಧಿಯವರ ಈ ಭಾಷಣವು ಬಂಗಾಳದಲ್ಲಿ ಕಾಂಗ್ರೆಸ್ ತನ್ನ ಕಳೆದುಹೋದ ನೆಲೆಯನ್ನು ಮರಳಿ ಪಡೆಯುವ ತಂತ್ರದ ಭಾಗವಾಗಿದೆ. ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ವಿರೋಧಿ ಗುಂಪಿನ ಪ್ರಬಲ ನಾಯಕಿ ಎಂದು ಬಿಂಬಿಸಲಾಗುತ್ತಿದ್ದರೂ, ಬಂಗಾಳದಲ್ಲಿ ಕಾಂಗ್ರೆಸ್ ಈಗ ಅವರನ್ನು ನೇರ ವೈರಿ ಎಂದು ಪರಿಗಣಿಸಿದೆ. ಬಿಜೆಪಿ ಮತಗಳನ್ನು ಕದಿಯಲು ಯತ್ನಿಸುತ್ತಿದ್ದರೆ, ಟಿಎಂಸಿ ಅದಕ್ಕೆ ದಾರಿ ಮಾಡಿಕೊಡುತ್ತಿದೆ ಎನ್ನುವ ಮೂಲಕ, ಬಿಜೆಪಿ ಮತ್ತು ಟಿಎಂಸಿ ನಡುವೆ ಒಳಒಪ್ಪಂದವಿದೆ ಎಂಬ ಅನುಮಾನವನ್ನು ರಾಹುಲ್ ಮತದಾರರಲ್ಲಿ ಬಿತ್ತಲು ಯತ್ನಿಸಿದ್ದಾರೆ.
ಈ ಱಲಿಯು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಟಿಎಂಸಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸೂಚನೆ ನೀಡಿದೆ. ಭ್ರಷ್ಟಾಚಾರ ಮತ್ತು ಉದ್ಯೋಗದ ವಿಷಯಗಳನ್ನು ಮುಂದಿಟ್ಟುಕೊಂಡು ಬಂಗಾಳದ ಜನಮನ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ,(ಏಜೆನ್ಸೀಸ್).