ಮಹಾರಾಷ್ಟ್ರ ಮಹಾಯುತಿ ಮೈತ್ರಿಯಲ್ಲಿ ಬಿರುಕು? ಅಮಿತ್ ಷಾ ಭೇಟಿಯಾಗಿ 7 ಸೀಟುಗಳಿಗೆ ಪಟ್ಟು ಹಿಡಿದ ಏಕನಾಥ್ ಶಿಂದೆ!
ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ವಿಧಾನ ಪರಿಷತ್ ಚುನಾವಣೆಯ ಸೀಟು ಹಂಚಿಕೆಯು ಭಾರಿ ರಾಜಕೀಯ ಚಂಡಮಾರುತ ಸೃಷ್ಟಿಸಿದೆ. ಜೂನ್ 18 ರಂದು ನಡೆಯಲಿರುವ 17 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ಸಂಬಂಧಿಸಿದಂತೆ ಶಿವಸೇನಾ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ(Eknath Shinde Meets Amit Shah) ಅವರು ತಮಗೆ ಹೆಚ್ಚಿನ ಪಾಲು ನೀಡಬೇಕೆಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಪಟ್ಟು ಹಿಡಿದಿದ್ದಾರೆ.
ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ಸೀಟು ಹಂಚಿಕೆಯಾಗಬೇಕು ಎಂಬುದು ಬಿಜೆಪಿಯ ವಾದವಾಗಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ 12, ಶಿವಸೇನಾ (ಶಿಂದೆ) 3 ಮತ್ತು ಎನ್‌ಸಿಪಿ 2 ಸ್ಥಾನಗಳನ್ನು ಹೊಂದಿವೆ. ಆದರೆ, ಒಟ್ಟು 17 ಸೀಟುಗಳ ಪೈಕಿ ಕನಿಷ್ಠ 7 ಸ್ಥಾನಗಳು ತಮಗೆ ಸಿಗಬೇಕು ಎಂದು ಶಿಂದೆ ಪಟ್ಟು ಹಿಡಿದಿರುವುದು ಮೈತ್ರಿಯಲ್ಲಿ ಬಿರುಕು ಮೂಡಿಸಿದೆ.
"ನಮ್ಮ ಜಾಗವನ್ನು ಬಿಜೆಪಿ ಕಸಿದುಕೊಳ್ಳುತ್ತಿದೆ": ಶಿಂದೆ ಸಚಿವರ ಗಂಭೀರ ಆರೋಪ
ಹೆಸರು ಹೇಳಲಿಚ್ಛಿಸದ ಶಿವಸೇನಾದ ಪ್ರಮುಖ ಸಚಿವರೊಬ್ಬರು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ರಾಜಕೀಯ ಬೆಳವಣಿಗೆ ಮತ್ತು ವಿಸ್ತರಣೆಯ ಹೆಸರಿನಲ್ಲಿ ಬಿಜೆಪಿ ಪ್ರತಿ ಚುನಾವಣೆಯಲ್ಲೂ ನಮಗಿಂತ ಹೆಚ್ಚಿನ ಪಾಲನ್ನು ಕಸಿದುಕೊಳ್ಳುತ್ತಿದೆ. ಇದು ನಮಗೆ ಯಾವುದೇ ಕಾರಣಕ್ಕೂ ಒಪ್ಪಿಗೆಯಿಲ್ಲ. ಈ ಹಿಂದೆ 17 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ನಮ್ಮ ಶಿವಸೇನಾ ಪ್ರತಿನಿಧಿಸುತ್ತಿತ್ತು. ಈಗ ಆ ಸೀಟುಗಳನ್ನು ನಾವು ಬಿಜೆಪಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮೈತ್ರಿಕೂಟದ ಸೌಹಾರ್ದತೆಯನ್ನು ಕಾಪಾಡಲು ಮುಂದಾಗಿದ್ದು, ನಾವು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅತ್ಯಂತ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ. ನಾಸಿಕ್ ಮತ್ತು ಛತ್ರಪತಿ ಸಂಭಾಜಿನಗರ ಸ್ಥಾನಗಳಿಗಾಗಿ ಶಿವಸೇನಾ ಜೊತೆ ಹಾಗೂ ಪುಣೆ ಸ್ಥಾನಕ್ಕಾಗಿ ಎನ್‌ಸಿಪಿ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
ಉದ್ಧವ್ ಬಣದ ಸಂಸದರನ್ನು ಸೆಳೆಯಲು ಶಿಂದೆ ಸ್ಕೆಚ್! ರೆಡ್ ಸಿಗ್ನಲ್ ಕೊಟ್ಟ ಬಿಜೆಪಿ!
ಸ್ಥಾನಗಳ ಹಂಚಿಕೆಯ ಜೊತೆಗೆ, ಏಕನಾಥ್ ಶಿಂದೆ ಅವರು ಅಮಿತ್ ಷಾ ಮುಂದೆ ಮತ್ತೊಂದು ಪ್ರಮುಖ ಪ್ರಸ್ತಾವನೆಯನ್ನು ಇಟ್ಟಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣದ 9 ಲೋಕಸಭಾ ಸಂಸದರ ಪೈಕಿ ಕನಿಷ್ಠ ಆರು ಸಂಸದರು 2029 ರ ಲೋಕಸಭಾ ಚುನಾವಣೆಯ ಟಿಕೆಟ್ ಭರವಸೆ ಸಿಕ್ಕರೆ ತಮ್ಮ ಬಣಕ್ಕೆ ಬರಲು ಸಿದ್ಧರಾಗಿದ್ದಾರೆ ಎಂದು ಶಿಂದೆ ಹೇಳಿದ್ದಾರೆ. ಆದರೆ, ಇದಕ್ಕೆ ಬಿಜೆಪಿಯ ರಾಜ್ಯ ಘಟಕವು ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪ್ರಸ್ತುತ ದೇಶದಲ್ಲಿ ತೈಲ ಬಿಕ್ಕಟ್ಟು ಹಾಗೂ ಹಣದುಬ್ಬರದಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶವಿದೆ. ಇಂತಹ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಅವರ ಪಕ್ಷವನ್ನು ಮತ್ತಷ್ಟು ಸೀಳಿ ದುರ್ಬಲಗೊಳಿಸುವುದರಿಂದ ಬಿಜೆಪಿಗೆ ಯಾವುದೇ ರಾಜಕೀಯ ಲಾಭವಿಲ್ಲ. ಬದಲಾಗಿ, ಈ ಹಂತದಲ್ಲಿ ಅವರ ಸಂಸದರನ್ನು ಸೆಳೆದರೆ ಸಾರ್ವಜನಿಕರಲ್ಲಿ ಉದ್ಧವ್ ಠಾಕ್ರೆ ಪರವಾಗಿ ಮತ್ತೊಮ್ಮೆ ಅನುಕಂಪದ ಅಲೆ ಸೃಷ್ಟಿಯಾಗಿ ಅದು ಬಿಜೆಪಿಗೆ ತಿರುಗುಬಾಣವಾಗಬಹುದು ಎಂದು ಹೈಕಮಾಂಡ್‌ಗೆ ವರದಿ ರವಾನಿಸಲಾಗಿದೆ.
ನಿಗಮ ಮಂಡಳಿಗಳ ನೇಮಕಾತಿ ನನೆಗುದಿಗೆ!
2024 ರ ಡಿಸೆಂಬರ್‌ನಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ನೂತನ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳು ಕಳೆದರೂ, ರಾಜ್ಯದ ಮೂರು ಡಜನ್‌ಗೂ ಹೆಚ್ಚು ಸರ್ಕಾರಿ ನಿಗಮ ಮಂಡಳಿಗಳು ಮತ್ತು ಸಂಸ್ಥೆಗಳ ರಾಜಕೀಯ ನೇಮಕಾತಿಗಳು ಇನ್ನೂ ಅಂತಿಮಗೊಂಡಿಲ್ಲ. ಈ ವಿಳಂಬ ನೀತಿಯೂ ಕೂಡ ಶಿಂದೆ ಮತ್ತು ಅಜಿತ್ ಪವಾರ್ ಬಣದಲ್ಲಿ ಅಸಮಾಧಾನ ಮೂಡಲು ಮುಖ್ಯ ಕಾರಣವಾಗಿದೆ.
ಜೂನ್ 18 ರಂದು ಮತದಾನ ಹಾಗೂ ಜೂನ್ 22 ರಂದು ಮತ ಎಣಿಕೆ ನಡೆಯಲಿದ್ದು, ಈ ವಿಧಾನ ಪರಿಷತ್ ಚುನಾವಣೆ ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಭವಿಷ್ಯವನ್ನು ನಿರ್ಧರಿಸುವ ದಿಕ್ಸೂಚಿಯಾಗಲಿದೆ,(ಏಜೆನ್ಸೀಸ್).