ದೀದಿ ಕೋಟೆಗೆ ಬಿರುಕು, ಇನ್ನು ತೃಣಮೂಲ ಉಳಿಯಲ್ಲ! ಶಾಸಕರ ಬಂಡಾಯದ ಬೆನ್ನಲ್ಲೇ ಸಂಸದರಲ್ಲೂ ದಂಗೆಯ ಮುನ್ಸೂಚನೆ ನೀಡಿದ ಟಿಎಂಸಿ ಸಂಸದ!
ಕೋಲ್ಕತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭುಗಿಲೆದ್ದಿರುವ ಬಂಡಾಯ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಪಕ್ಷದ ಅಸ್ತಿತ್ವಕ್ಕೇ ಕಂಟಕ ತಂದೊಡ್ಡಿದೆ. ರಾಜ್ಯ ವಿಧಾನಸಭೆಯಲ್ಲಿ ಶಾಸಕರು ದಂಗೆ ಎದ್ದ ಬೆನ್ನಲ್ಲೇ, ಈಗ ಸಂಸತ್ತಿನಲ್ಲೂ ಟಿಎಂಸಿ ಸಂಸದರು ಬಂಡಾಯದ ಹಾದಿ ಹಿಡಿಯಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್(Sukhendu Sekhar Ray) ಶನಿವಾರ ಬಾಂಬ್ ಸಿಡಿಸಿದ್ದಾರೆ. ಈ ಬೆಳವಣಿಗೆಗಳು ಪಕ್ಷದ ಅವನತಿಗೆ ನಾಂದಿ ಹಾಡಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಪಕ್ಷದ ಒಟ್ಟು 80 ಶಾಸಕರ ಪೈಕಿ 60 ಶಾಸಕರು ಒಟ್ಟಾಗಿ ವಿಧಾನಸಭೆಯಿಂದ ಹೊರನಡೆದು ಬಂಡಾಯ ಸಾರಿರುವುದು ಇತಿಹಾಸದಲ್ಲೇ ಅಭೂತಪೂರ್ವ. ಈ ಪರಿಸ್ಥಿತಿಯನ್ನು ನೋಡಿದರೆ ತೃಣಮೂಲ ಕಾಂಗ್ರೆಸ್ ಇನ್ಮುಂದೆ ಬದುಕುಳಿಯುವುದು ಅಸಾಧ್ಯ ಎಂದು ರಾಯ್ ನೇರವಾಗಿಯೇ ಹೇಳಿದ್ದಾರೆ.
ಸಂಸತ್ತಿನಲ್ಲೂ ದೀದಿಗೆ ಶಾಕ್?
ಬಂಗಾಳ ರಾಜಕಾರಣದ ಈ ಬಿಕ್ಕಟ್ಟು ಕೇವಲ ವಿಧಾನಸಭೆಗೆ ಸೀಮಿತವಾಗಿಲ್ಲ. ಇದರ ಬಿಸಿ ಶೀಘ್ರದಲ್ಲೇ ಸಂಸತ್ತಿಗೂ ತಟ್ಟಲಿದೆ. ಲೋಕಸಭೆಯಲ್ಲಿ ಅತಿ ದೊಡ್ಡ ರಾಜಕೀಯ ಹೈಡ್ರಾಮಾ ನಡೆಯಲಿದ್ದು, ಅದರ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಟಿಎಂಸಿ ಸಂಸದರು ದಂಗೆ ಏಳಲಿದ್ದಾರೆ ಎಂದು ಸುಖೇಂದು ಶೇಖರ್ ರಾಯ್ ಎಚ್ಚರಿಸಿದ್ದಾರೆ.
ಪಕ್ಷದ ಹೆಸರು ಮತ್ತು ಅಧಿಕೃತ ಚಿಹ್ನೆ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್, ಇದು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ನಿರ್ಧಾರವಾಗಲಿದೆ. ಪಕ್ಷದ ಬಹುಪಾಲು ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ಬಣದಲ್ಲಿ ಇರುತ್ತಾರೋ ಅವರಿಗೆ ಚಿಹ್ನೆ ಸಿಗುತ್ತದೆ. ಇದು ನ್ಯಾಯಾಲಯದ ಮೆಟ್ಟಿಲೇರುವುದು ಖಂಡಿತ ಎಂದಿದ್ದಾರೆ. ಪಕ್ಷದಿಂದ ಉಚ್ಚಾಟಿತವಾಗಿರುವ ಶಾಸಕ ರಿತಬ್ರತಾ ಬ್ಯಾನರ್ಜಿ ಅವರನ್ನು ಬಂಡಾಯ ಶಾಸಕರು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದಾಗಿನಿಂದ ಈ ವಿವಾದ ತಾರಕಕ್ಕೇರಿದೆ.
ದೀದಿ ನಮ್ಮ ನಾಯಕಿ, ಆದರೆ ಅಭಿಷೇಕ್ ನಾಯಕತ್ವಕ್ಕೆ ವಿರೋಧ!
ವಿಚಿತ್ರವೆಂದರೆ, ಬಂಡಾಯ ಎದ್ದಿರುವ 60 ಶಾಸಕರು ಪಕ್ಷದ ಸುಪ್ರೀಂ ಮಮತಾ ಬ್ಯಾನರ್ಜಿ ಅವರ ಮೇಲಿನ ನಿಷ್ಠೆಯನ್ನು ಇನ್ನೂ ಮುಂದುವರಿಸಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಅವರ ಸೋದರಾವಳಿ ಅಭಿಷೇಕ್ ಬ್ಯಾನರ್ಜಿ ಅವರ ಸರ್ವಾಧಿಕಾರಿ ಧೋರಣೆ ಮತ್ತು ನಾಯಕತ್ವದ ವಿರುದ್ಧ ಈ ಬಂಡಾಯ ನಡೆದಿದೆ ಎನ್ನಲಾಗಿದೆ.
ಬಂಡಾಯ ಬಣದ ಸಭೆಯಲ್ಲಿ ರಿತಬ್ರತಾ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಅವರು ನಮ್ಮ ಮರುಸಂಘಟಿತ ಪಕ್ಷಕ್ಕೆ 'ಮುಖ್ಯ ಸಲಹೆಗಾರ' ಆಗಿರಲಿದ್ದಾರೆ ಎಂದು ಪ್ರಸ್ತಾಪಿಸಿದ್ದರು. ಆದರೆ ಇದಕ್ಕೆ ಬಂಡಾಯ ಶಾಸಕರಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಬಂಡಾಯ ಶಾಸಕರಾದ ಗುಲ್ಶನ್ ಮುಲ್ಲಿಕ್ ಮತ್ತು ಸಂಗೀತಾ ರಾಯ್ ಬಸುನಿಯಾ, ಮಮತಾ ಕೇವಲ ಸಲಹೆಗಾರರಲ್ಲ, ಅವರೇ ನಮ್ಮ ಸರ್ವೋಚ್ಚ ನಾಯಕಿ. ಪಕ್ಷ ಅವರ ನೇತೃತ್ವದಲ್ಲೇ ನಡೆಯಬೇಕು. ಒಂದು ವೇಳೆ ಅವರನ್ನು ಸುಪ್ರೀಂ ಲೀಡರ್ ಎಂದು ಒಪ್ಪದಿದ್ದರೆ ನಾವು ಈ ಬಣದಲ್ಲಿ ಇರಬೇಕೋ ಬೇಡವೋ ಎಂದು ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
1998ರ ನಂತರ ಎದುರಾದ ಅತಿದೊಡ್ಡ ಕಂಟಕ
1998ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದಾಗಿನಿಂದ ಮಮತಾ ಬ್ಯಾನರ್ಜಿ ಅವರೇ ಪಕ್ಷದ ಏಕೈಕ ಮತ್ತು ನಿರ್ವಿವಾದಿತ ನಾಯಕಿಯಾಗಿದ್ದಾರೆ. ಆದರೆ, ಅವರ ರಾಜಕೀಯ ಜೀವನದಲ್ಲೇ ಇಂತಹ ಭೀಕರ ಆಂತರಿಕ ಕಲಹ ಎಂದೂ ಎದುರಾಗಿರಲಿಲ್ಲ. ಮಮತಾ ಅವರ ಆಪ್ತರಾದ ಬಾರಾಸತ್ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಸೇರಿದಂತೆ ಹಲವು ಹಿರಿಯ ನಾಯಕರು ಪಕ್ಷದ ಸದ್ಯದ ನಾಯಕತ್ವದ ಶೈಲಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಮತಾ ಅವರು ಅತೃಪ್ತ ಶಾಸಕರು ಮತ್ತು ಸಂಸದರ ಜೊತೆ ಖುದ್ದಾಗಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ದಿಲ್ಲಿಗೆ ಹೊರಟ ಮಾಜಿ ಸಿಎಂ ಮಮತಾ!
ಈ ಎಲ್ಲಾ ರಾಜಕೀಯ ಬಿರುಗಾಳಿಯ ನಡುವೆಯೇ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ರಾಜಧಾನಿ ನವದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ನಡೆಯಲಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಅಧಿಕೃತವಾಗಿ ಇದು ಒಕ್ಕೂಟದ ಸಭೆ ಎನ್ನಲಾಗಿದ್ದರೂ, ದೆಹಲಿಯಲ್ಲಿರುವ ತಮ್ಮ ಪಕ್ಷದ ಸಂಸದರನ್ನು ಒಟ್ಟುಗೂಡಿಸಿ, ಪಕ್ಷ ಕೈತಪ್ಪಿ ಹೋಗದಂತೆ ತಡೆಯಲು ಮಮತಾ ಈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).