ಲಖನೌ: ಮಲಗಿದ್ದ ಪತಿ ಮೇಲೆ ಆಸಿಡ್ ಎರಚಿ ಆತನನ್ನು ವಿರೂಪಗೊಳಿಸಿ, ಶಾಶ್ವತವಾಗಿ ಕುರುಡನಾಗಿ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ತ್ವರಿತ ನ್ಯಾಯಾಲಯವು ಸೋಮವಾರ(ಜೂ 01) ಜೀವಾವಧಿ ಶಿಕ್ಷೆ(life imprisonment) ಮತ್ತು 1.75 ಲಕ್ಷ ರೂ. ದಂಡ ವಿಧಿಸಿದೆ.
ಚಂದೌಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೋಪಾಲ್ ಜಿ ಅವರು ಮೇ 27ರಂದು ಆರೋಪಿ ಪತ್ನಿ ಕಹಕಂಷಾ(30) ನನ್ನು ದೋಷಿ ಎಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯನ್ನು ಪ್ರಕಟ ಮಾಡಿದರು. ಘಟನೆಯೂ ಕಳೆದ ವರ್ಷ 2025 ಮಾರ್ಚ್ 7 ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದ್ರ ಕುಮಾರ್ ಯಾದವ್, 2025 ಮಾರ್ಚ್ 7ರಂದು ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಕಹಕಂಷಾ ತನ್ನ ಪತಿ ಮುಜಾಫರ್ ಅವರನ್ನು ಕೊಲ್ಲುವ ಉದ್ದೇಶದಿಂದ ಮನೆಯಲ್ಲಿ ಮಲಗಿದ್ದಾಗ ಅವರ ಮೇಲೆ ಆಸಿಡ್ ಸುರಿದಿದ್ದಾಳೆ ಎಂದು ತಿಳಿಸಿದ್ದಾರೆ.
ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಮಹಿಳೆ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾಳೆಂದು ಹೇಳಿಕೊಂಡು ಪತಿ ವಿಚ್ಛೇದನವನ್ನು ಕೋರುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೇ ಗಲಾಟೆ ಮುಂದುವರೆದು ಅವರ ಮೇಲೆ ಆಸಿಡ್ ಎರಚಿದ್ದಾಳೆ. ಇದರಿಂದ ಅವರ ಎರಡು ಕಣ್ಣುಗಳ ದೃಷ್ಟಿ ಹೋಗಿವೆ ಎಂದು ಹೇಳಿದ್ದಾರೆ.
ಬಿಎನ್ಎಸ್ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ 2025 ಮಾರ್ಚ್ 20ರಂದು ನಖಾಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧದ ಗಂಭೀರತೆಯನ್ನು ಗಮನಿಸಿದ ನ್ಯಾಯಾಲಯವು, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 1.75 ಲಕ್ಷ ರೂ. ದಂಡ ವಿಧಿಸಿದೆ ಎಂದಿದ್ದಾರೆ (ಏಜೆನ್ಸೀಸ್).