ಸಚಿವ ನಿತೀಶ್​ ರಾಣೆ 
ದೇಶ

ರಾಷ್ಟ್ರೀಯ ಹೆದ್ದಾರಿ ಇಂಜನಿಯರ್​ಗೆ ಕೆಸರೆರಚಿದ ಪ್ರಕರಣ; ಸಚಿವ ನಿತೇಶ್ ರಾಣೆಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​ | Nitesh Rane

ಮುಂಬೈ: 2019ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಒಬ್ಬರಿಗೆ ಕೆಸರೆರಚಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರ ಸರ್ಕಾರದ ಸಚಿವ ನಿತೀಶ್​ ರಾಣೆಗೆ ಸಿಂಧುದುರ್ಗದ ನ್ಯಾಯಾಲಯವು ಒಂದು ಲಕ್ಷ ರೂ. ದಂಡ ಮತ್ತು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
2019ರ NHAI ಎಂಜಿನಿಯರ್ ಪ್ರಕಾಶ್ ಶೇಡೇಕರ್ ಅವರ ಮೇಲೆ ಕೆಸರು ಎರಚಿದ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ಸೇರಿದಂತೆ 30 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಎಸ್. ದೇಶಮುಖ್, ಕಳಪೆ ಗುಣಮಟ್ಟದ ಕೆಲಸ ಮತ್ತು ಸಾರ್ವಜನಿಕ ಅನಾನುಕೂಲತೆಯ ಬಗ್ಗೆ ಕಳವಳ ವ್ಯಕ್ತಪಡಿಸಲು ರಾಣೆ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದರೂ, ಸಾರ್ವಜನಿಕವಾಗಿ ಸಾರ್ವಜನಿಕ ಸೇವಕನನ್ನು ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ.
ಇಂತಹ ಘಟನೆಗಳು ಮುಂದುವರಿದರೆ, ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯಗಳನ್ನು ಘನತೆಯಿಂದ ನಿರ್ವಹಿಸಲು ಸಾಧ್ಯವಾಗದಿರಬಹುದು. ಹೀಗಾಗಿ ಪ್ರಕರಣದ ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿ, ಕಾನೂನು ದುರುಪಯೋಗ ಮಾಡಿದ ಆರೋಪದ ಮೇಲೆ ಬಿಎನ್​ಎಸ್​ ಸೆಕ್ಷನ್ 504 ಅಡಿಯಲ್ಲಿ ನಿತೇಶ್ ರಾಣೆ ದೋಷಿ ತೀರ್ಪು ನೀಡಿದ್ದಾರೆ. ಜೊತೆಗೆ ಒಂದು ಲಕ್ಷ ರೂ. ದಂಡ ಮತ್ತು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣ ಹಿನ್ನೆಲೆ

2019 ಜುಲೈ 4ರಂದು ರಾಣೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮುಂಬೈ-ಗೋವಾ ಹೆದ್ದಾರಿಯ ಕೆಲಸವನ್ನು ಪರಿಶೀಲಿಸಲು ಕಂಕವ್ಲಿಯ ಗಡ್ ನದಿಯ ಮೇಲಿನ ಸೇತುವೆಗೆ NHAI ಉಪ-ವಿಭಾಗೀಯ ಎಂಜಿನಿಯರ್ ಪ್ರಕಾಶ್ ಶೇಡೇಕರ್ ಅವರನ್ನು ಕರೆಸಿದ್ದರು.
ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಮತ್ತು ನೀರಿನ ಅಡಚಣೆಯಿಂದ ಹತಾಶೆಗೊಂಡ ಅವರು ಎಂಜಿನಿಯರ್‌ ಶೇಡೇಕರ್ ಮೇಲೆ ಕೆಸರು ನೀರನ್ನು ಸುರಿದು ಸಾರ್ವಜನಿಕವಾಗಿ ಕೆಸರುಮಯ ಪ್ರದೇಶದಲ್ಲಿ ನಡೆಯುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಇಂಜಿನಿಯರ್ ಶಾಸಕರು ಸೇರಿ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದರು (ಏಜೆನ್ಸೀಸ್).