ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಾಡ್ಸೆ
ಮುಂಬೈ: ಭೋಸಾರಿ ಭೂ ಹಗರಣ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ಏಕನಾಥ್ ಖಾಡ್ಸೆ, ಅವರ ಪತ್ನಿ ಮಂದಾಕಿನಿ ಖಾಡ್ಸೆ ಮತ್ತು ಅಳಿಯ ಗಿರೀಶ್ ಚೌಧರಿ ಪ್ರಕರಣವನ್ನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿರುವುದಾಗಿ ವರದಿಯಾಗಿದೆ. ನ್ಯಾಯಾಲಯದ ಈ ನಿರ್ಧಾರ ಈಗ ಮೂವರ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲು ಕಾರಣವಾಗುತ್ತದೆ.
ಸಬ್-ರಿಜಿಸ್ಟ್ರಾರ್ನನ್ನು ಆರೋಪಿಯನ್ನಾಗಿಸಬೇಕೆ, ಬೇಡವೇ ಎನ್ನುವುದನ್ನು ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ ನಿರ್ಧರಿಸುವ ಸಾಧ್ಯತೆ ಇದ್ದು, ಮುಂಬರುವ ಸಾಕ್ಷ್ಯಗಳನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ.
ಪ್ರಕರಣದ ವಿವರಗಳ ಪ್ರಕಾರ, ಪುಣೆ ಬಳಿಯ ಭೋಸಾರಿ ಕೈಗಾರಿಕಾ ಪ್ರದೇಶದಲ್ಲಿ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ (MIDC) ಭೂಮಿಯನ್ನು ಖರೀದಿಸಿರುವ ಆರೋಪ ಕೇಳಿ ಬಂದಿದ್ದು, ಖಡ್ಸೆ ತಮ್ಮ ಅಧಿಕಾರವನ್ನು ಬಳಸಿಕೊಂಡು ತಮ್ಮ ಪತ್ನಿ ಮತ್ತು ಅಳಿಯ ಈ ಸರ್ಕಾರಿ ಭೂಮಿಯನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಾಗದ ನೈಜ ಬೆಲೆ 31.01 ಕೋಟಿ ರೂ.ಗಳಷ್ಟಿದ್ದು, ಖಡ್ಸೆ ಕುಟುಂಬವು 3.75 ಕೋಟಿ ರೂ.ಗಳಿಗೆ ಇದನ್ನು ಭೂಮಿಯನ್ನು ಖರೀದಿಸಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಖಡ್ಸೆ ಮತ್ತು ಅವರ ಪತ್ನಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದರೂ, ತನಿಖಾ ಸಂಸ್ಥೆ ಅವರನ್ನು ಈವರೆಗೂ ಬಂಧಿಸಿಲ್ಲ. ಅಳಿಯ ಗಿರೀಶ್ ಚೌಧರಿಯನ್ನು ಜುಲೈ 2021 ರಲ್ಲಿ ಬಂಧಿಸಲಾಯಿತು ಮತ್ತು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡುವ ಮೊದಲು ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದರು(ಏಜೆನ್ಸೀಸ್).