ಮೃತ ಕಲಾಧರನ್ ಮತ್ತು ಅವರ ತಾಯಿ 
ದೇಶ

ಮಕ್ಕಳನ್ನು ತಾಯಿ ವಶಕ್ಕೆ ನೀಡಲು ಕೋರ್ಟ್ ಆದೇಶ; ಆದರೆ ಅವರನ್ನು ಕೊಂದು ತಾಯಿ ಜೊತೆ ವ್ಯಕ್ತಿ ಆತ್ಮಹತ್ಯೆ | Suicide

ತಿರುವನಂತಪುರಂ: ಕೌಟುಂಬಿಕ ಕಲಹ ಹಿನ್ನೆಲೆ ಮಕ್ಕಳನ್ನು ಪ್ರತ್ಯೇಕವಾಗಿ ವಾಸಿಸುತ್ತಿರುವ ತಾಯಿ ವಶಕ್ಕೆ ನೀಡುವಂತೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆ, ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬುಧವಾರ(ಡಿ. 24) ವರದಿಯಾಗಿದೆ.
ಡಿ. 22ರಂದು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪಯ್ಯನ್ನೂರು ಗ್ರಾಮದ ರಾಮಂತಲಿಯ 36 ವರ್ಷದ ಕಲಾಧರನ್ ಅವರ ಪತ್ನಿ ನಯನತಾರಾ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇಬ್ಬರು ಮಕ್ಕಳನ್ನು ತನಗೆ ಹಸ್ತಾಂತರಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು ಮಕ್ಕಳ ಪಾಲನೆಯನ್ನು ನಯನತಾರಾ ಅವರಿಗೆ ಹಸ್ತಾಂತರಿಸುವಂತೆ ಆದೇಶಿಸಿದೆ. 
ಪತ್ನಿ ನಯನತಾರಾ ಮಕ್ಕಳನ್ನು ಪಡೆಯಲು ಪೊಲೀಸರ ಸಹಾಯವನ್ನು ಕೋರಿದ್ದು, ಪೊಲೀಸರು ಕಾಲಾಧರನ್ ಅವರಿಗೆ ಮಕ್ಕಳನ್ನು ತಾಯಿಗೆ ಹಸ್ತಾಂತರಿಸುವಂತೆ ಹೇಳಿದ್ದಾರೆ. ಆದರೆ ಹಸ್ತಾಂತರಿಸಲು ಇಷ್ಟಪಡದ ತಂದೆ ತನ್ನ ಮಕ್ಕಳಾದ ಹಿಮಾ(6), ಕಣ್ಣನ್(2) ಎಂಬ ಮಕ್ಕಳು ಮತ್ತು 56 ವರ್ಷದ ತಾಯಿ ಉಷಾ ಅವರಿಗೆ ವಿಷ ಕುಡಿಸಿ ಕೊಂದಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಟೋ ಚಾಲಕರಾಗಿದ್ದ ಕಲಾಧರನ್ ಅವರ ತಂದೆ ಮನೆಗೆ ಬಂದಾಗ ಯಾರೂ ಬಾಗಿಲು ತೆರಯದಿದ್ದಾಗ, ಬಾಗಿಲ ಮುಂದಿದ್ದ ಡೆತ್​ನೋಟ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆಗೆದು ಒಳ ಹೋದ ವೇಳೆ ಮಕ್ಕಳು ಸೇರಿ ನಾಲ್ವರ ಶವಗಳು ಪತ್ತೆಯಾಗಿವೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).