ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್
ನವದೆಹಲಿ: ಸದ್ಯ ಭಾರತದ ಕ್ರಿಮಿನಲ್ ಲೋಕದಲ್ಲಿ ಸದಾ ಸುದ್ದಿಯಲ್ಲಿರುವ ಹೆಸರೆಂದರೆ ಅದು ಲಾರೆನ್ಸ್ ಬಿಷ್ಣೋಯಿ (Lawrence Bishnoi) ನದು. ಇಂದು (ಏ.21) ಈತನಿಗೆ ಮತ್ತು ಈತನ ಗ್ಯಾಂಗ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಈಗ ದೊಡ್ಡ ಶಾಕ್ ನೀಡಿದೆ. ಹಲವಾರು ರಾಜ್ಯಗಳಲ್ಲಿ ಹರಡಿಕೊಂಡಿರುವ ಈತನ ಕ್ರಿಮಿನಲ್ ಸಾಮ್ರಾಜ್ಯಕ್ಕೆ ಬ್ರೇಕ್ ಹಾಕಲು ನ್ಯಾಯಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸುಮಾರು 19 ಅಧಿಕೃತ ಸಹಚರರ ಮೇಲೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ (MCOCA) ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಕಾಯ್ದೆ ಅಡಿಯಲ್ಲಿ ಸಹ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಜೈಲೇ ಅಡ್ಡ, ಮೊಬೈಗಳೇ ಆಯುಧ!
ಲಾರೆನ್ಸ್ ಬಿಷ್ಣೋಯ್ ಜೈಲಿನ ಒಳಗಿದ್ದರೂ ಸಹ ಆರಾಮವಾಗಿ ತನ್ನ ಗ್ಯಾಂಗ್ ಕಾರ್ಯಾಚರಣೆಯನ್ನು ನಿರ್ದೇಶಿಸುತ್ತಿದ್ದನಂತೆ. ದೆಹಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ದೆಹಲಿ, ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶ - ಹೀಗೆ 5 ರಾಜ್ಯಗಳಲ್ಲಿ ಈ ಗ್ಯಾಂಗ್ ತನ್ನ ಸುಲಿಗೆ ಜಾಲವನ್ನು ಭದ್ರವಾಗಿ ಹರಡಿಕೊಂಡಿತ್ತು.
ಜೈಲಿನ ಒಳಗಿದ್ದ ಗ್ಯಾಂಗ್ ಸದಸ್ಯರಿಂದ ಹಲವಾರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೂಲಕವೇ ಹೊರಗಿನ ಸಹಚರರಿಗೆ ಆರ್ಡರ್ ಕೊಡಲಾಗುತ್ತಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ವಿದೇಶದಲ್ಲೂ ಇದೆ ಬಿಷ್ಣೋಯ್ ಲಿಂಕ್!
ಈ ಗ್ಯಾಂಗ್‌ನ ವ್ಯಾಪ್ತಿ ಕೇವಲ ಗಲ್ಲಿಗಳಿಗೆ ಅಥವಾ ರಾಜ್ಯಗಳಿಗೆ ಸೀಮಿತವಾಗಿಲ್ಲ. ತನಿಖೆಯ ಪ್ರಕಾರ, ಸಿಂಡಿಕೇಟ್‌ನ ಕೆಲವು ಪ್ರಮುಖ ಸದಸ್ಯರು ಥೈಲ್ಯಾಂಡ್, ಕೆನಡಾ ಮತ್ತು ಅಮೆರಿಕಾದಲ್ಲಿ ಕುಳಿತುಕೊಂಡು ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ.
ದೇಶದ ಗಡಿ ದಾಟಿಯೂ ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್ ವಿಸ್ತರಣೆಯಾಗಿರುವುದು ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕೊಲೆ, ಕೊಲೆಯತ್ನ, ಅಪಹರಣ, ದರೋಡೆ ಮತ್ತು ಹಣಕ್ಕಾಗಿ ಬೆದರಿಕೆ ಹಾಕುವುದೇ ಈ ಗ್ಯಾಂಗ್‌ನ ಮುಖ್ಯ ಕಸುಬಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದೆ.
ಬಿಷ್ಣೋಯ್ ಈಗ ಡಬಲ್ ತೊಂದರೆ!
ಲಾರೆನ್ಸ್ ಬಿಷ್ಣೋಯ್ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿದ್ದಕ್ಕೆ ಪ್ರಬಲ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯ ಗಮನಿಸಿದೆ. ಆರ್ಥಿಕ ಲಾಭಕ್ಕಾಗಿ ಯಾವುದೇ ಹಂತಕ್ಕೆ ಹೋಗುವ ಈ ಗ್ಯಾಂಗ್‌ನ ವ್ಯವಸ್ಥೆ ಎಷ್ಟು ಅತ್ಯಾಧುನಿಕವಾಗಿದೆಯೆಂದರೆ, ಜೈಲಿನ ಕಠಿಣ ಭದ್ರತೆಯ ನಡುವೆಯೂ ಇವರು ತಮ್ಮ ಸಂಪರ್ಕವನ್ನು ಕಳೆದುಕೊಂಡಿರಲಿಲ್ಲ. ಈಗ ಕೋರ್ಟ್ ಆರೋಪ ಹೊರಿಸುವ ಮೂಲಕ ಇಡೀ ಗ್ಯಾಂಗ್‌ನ ಕಾನೂನು ಹೋರಾಟ ಮತ್ತಷ್ಟು ಕಠಿಣವಾಗಲಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).