ಆತ್ಮಹತ್ಯೆ ಮಾಡಿಕೊಂಡ ದಂಪತಿ  
ದೇಶ

ಮೂರು ವರ್ಷದ ಮಗುವನ್ನು ದಂಡೆಯಲ್ಲೇ ಬಿಟ್ಟು ಗೋದಾವರಿ ನದಿಗೆ ಹಾರಿದ ದಂಪತಿ | Godavari River

ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಗುರುವಾರ(ಆ. 27) ತಡರಾತ್ರಿ ಪತಿ-ಪತ್ನಿ ತಮ್ಮ ಮೂರು ವರ್ಷದ ಮಗುವನ್ನ ದಡದಲ್ಲೇ ಬಿಟ್ಟು ಗೋದಾವರಿ ನದಿಗೆ(Godavari River) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದಂಪತಿ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಚಿಕ್ಕ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಸೇತುವೆ ಹತ್ತಿರ ಬಂದಿದ್ದು, ಮಗುವನ್ನು ಸ್ಕೂಟರ್‌ನಲ್ಲಿ ಬಿಟ್ಟು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ದಂಪತಿಯನ್ನು ದೊಡ್ಡ ಸಾಯಿ(29) ಮತ್ತು ಪತ್ನಿ ಶಿರೀಶಾ (28) ಎಂದು ಗುರುತಿಸಲಾಗಿದೆ. ವೇಲ್ಪುರು ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಮೂರು ವರ್ಷದ ಮಗು ಕತ್ತಲೆ ಮತ್ತು ಚಳಿಯಲ್ಲಿ ಸೇತುವೆಯ ಮೇಲೆ ಒಂಟಿಯಾಗಿ ಅಳುತ್ತಿರುವುದನ್ನು ದಾರಿಹೋಕರು ನೋಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಗು ಮತ್ತು ಸ್ಕೂಟರ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಮಗುವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಇನ್ನೂ ನದಿಗೆ ಹಾರಿದ ದಂಪತಿ ಪತ್ತೆ ಹಚ್ಚಲು ಪೊಲೀಸರು, ಸ್ಥಳೀಯ ರಕ್ಷಕರು, ಈಜುಗಾರರು ಮತ್ತು ದೋಣಿ ತಂಡಗಳೊಂದಿಗೆ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆತ್ಮಹತ್ಯೆಗೂ ಮುನ್ನ ದಂಪತಿ ವಿಡಿಯೋ ಮಾಡಿದ್ದು, ಅದರಲ್ಲಿ ಬದುಕಲು ಬಯಸುತ್ತೇವೆ, ಆದರೆ ಬದುಕಲು ಸಾಧ್ಯವಿಲ್ಲ, ಅಪ್ಪಾ ಹುಷರಾಗಿರಿ ಎಂದು ಹೇಳಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಮತ್ತು ಆಂಧ್ರಪ್ರದೇಶಕ್ಕೆ ಮರಳುವ ಮೊದಲು ಗಲ್ಫ್‌ನಲ್ಲಿ ಕೆಲಸ ಮಾಡ್ತಿದ್ದರು. ಹೆಚ್ಚುತ್ತಿರುವ ಸಾಲ ಮತ್ತು ಆರ್ಥಿಕ ಒತ್ತಡದಿಂದ ಅವರು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಆದಾಗ್ಯೂ, ಘಟನೆಗೆ ಆರ್ಥಿಕ ಸಂಕಷ್ಟವೇ ಕಾರಣವೇ ಅಥವಾ ಇನ್ಯಾವುದೋ ಕಾರಣವಿದೆಯೇ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).