ಹೈದರಾಬಾದ್: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಾ ಯುವಕರು, ಪುರುಷರನ್ನು ಸೆಳೆದು ಹನಿಟ್ರ್ಯಾಪ್ ಮಾಡ್ತಿದ್ದ ಜಾಲವೊಂದನ್ನು ಕರೀಂನಗರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದು, ವಿಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡಿ ಹಣ ಪೀಕುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ತೆಲಂಗಾಣದ ಮಂಚೇರಿಯಲ್ ಮೂಲದ ಈ ದಂಪತಿ ಮಾರ್ಬಲ್ ಮತ್ತು ಇಂಟೇರಿಯರ್ ಕೆಲಸದಲ್ಲಿ ನಷ್ಟ ಅನುಭವಿಸಿದ ಬಳಿಕ ಸುಲಭವಾಗಿ ಹಣಗಳಿಸುವ ಸಲುವಾಗಿ ದಂಧೆಗೆ ಇಳಿದಿದ್ದಾರೆ. ಮಂಚೇರಿಯಲ್ನಿಂದ ಕರೀಂನಗರಕ್ಕೆ ಸ್ಥಳಾಂತರಗೊಂಡ ಬಳಿಕ ದಂಪತಿ ಅರೆಪಲ್ಲಿಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು.
ಈ ವೇಳೆ ಪತ್ನಿಗೆ ಇನ್ಸ್ಟಾಗ್ರಾಂ ಮೂಲಕ ರೀಲ್ಸ್ ಮಾಡುತ್ತಾ, ಯುವಕರನ್ನು, ಉದ್ಯಮಿಗಳನ್ನು ಪರಿಚಯ ಮಾಡಿಕೊಂಡು, ಅವರ ಜೊತೆ ಸಂಬಂಧ ಬೆಳೆಸಲು ಪತಿಯೇ ನೆರವಾಗಿದ್ದಾನೆ. ಪತ್ನಿಯ ಅರೆನಗ್ನ ಫೋಟೋ ಗಳನ್ನು ಫೇಜ್ಗಳಲ್ಲಿ ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ.
ಹೀಗೆ ಯುವಕರು, ಪುರುಷರು, ಉದ್ಯಮಿಗಳು ಅವರನ್ನು ಸಂಪರ್ಕಿಸಿದಾಗ ಅಪಾರ್ಟ್ಮೆಂಟ್ನಲ್ಲಿರುವ ಮನೆಗೆ ಕರೆಸಿಕೊಂಡು ಪತ್ನಿ ಅವರ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಸೆರೆ ಹಿಡಿಯುತ್ತಿದ್ದರು ಎನ್ನಲಾಗಿದೆ. ಬಳಿಕ ವಿಡಿಯೋ ಇಟ್ಕೊಂಡು ಸಂತ್ರಸ್ತರಿಗೆ ಬ್ಲಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ.
100ಕ್ಕೂ ಹೆಚ್ಚು ಜನರಿಗೆ ಬ್ಲಾಕ್ಮೇಲ್
ದಂಪತಿಗಳು ಹೀಗೆ ಸುಮಾರು 100ಕ್ಕೂ ಹೆಚ್ಚು ಮಂದಿ ಜೊತೆ ಪತ್ನಿ ಲೈಂಗಿಕ ಕ್ರಿಯೆ ನಡೆಸಿದ್ರೆ, ಪತಿ ಅದನ್ನು ಸೆರೆ ಹಿಡಿದು ಬ್ಲಾಕ್ಮೇಲ್ ಮಾಡಿ ಹಣ ಸಂಗ್ರಹಿಸಿದ್ದಾರೆ. ಓರ್ವ ವ್ಯಕ್ತಿಯಿಂದ ಸುಮಾರು 12 ಲಕ್ಷ ರೂ.ಗಳನ್ನು ಪೀಕಿದ್ದು, ಅದರಿಂದ ಕಾರು, ರೆಫ್ರಿಜರೇಟರ್, ಹವಾನಿಯಂತ್ರಣ, ಸೋಫಾ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ.
ಬಳಿಕ ಅದೇ ವ್ಯಕ್ತಿ ಮತ್ತೆ 5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಕೊಲೆ ಬೆದರಿಕೆ ಹಾಕಿದ್ದಾರೆ. ಆಗ ಜೀವ ಭಯದಿಂದ ಆ ವ್ಯಕ್ತಿ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಕರೀಂನಗರ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಪೊಲೀಸರು ದಂಪತಿಯನ್ನು ಬಂಧಿಸಿದ್ದು, ಅವರಿಂದ ಕಾರು, ಹಣ, ಮೊಬೈಲ್ ಹಾಗೂ ಖಾಲಿ ಚೆಕ್ಗಳನ್ನು ವಶಕ್ಕೆ ಪಡೆದಿದ್ದಾರೆ (ಏಜೆನ್ಸೀಸ್).