ದೇಶ

5 ವಿಧಾನಸಭಾ, 1 ಲೋಕಸಭಾ ಕ್ಷೇತ್ರಗಳ Byelections ಮತ ಎಣಿಕೆ ಕಾರ್ಯ ಆರಂಭ; ವಿಜಯ್, ಸುವೇಂದು ಅಧಿಕಾರಿಗೆ ಬಿಗ್ ಡೇ

  • 4 ರಾಜ್ಯಗಳ 5 ವಿಧಾನಸಭಾ ಹಾಗೂ 1 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ.

  • ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರಕ್ಕೆ ಗೆಲುವು ಪ್ರತಿಷ್ಠೆ.

  • ತಮಿಳುನಾಡಿನ ಮಧುರಾಂತಕಂ, ಧಾರಾಪುರಂ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ.

ನವದೆಹಲಿ: ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 5 ವಿಧಾನಸಭಾ ಮತ್ತು 1 ಲೋಕಸಭಾ ಸೇರಿ 6 ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು (ಅ.9) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ತಮಿಳುನಾಡು ಸಿಎಂ ವಿಜಯ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಇಂದು ಬಿಗ್​ ಡೇಯಾಗಿದೆ. ಈ ಪರೀಕ್ಷೆಯ ಫಲಿತಾಂಶವು ನಾಯಕರ ಜನಪ್ರಿಯತೆ, ಹೊಸ ಸರ್ಕಾರಗಳ ಆಡಳಿತದ ಬಗ್ಗೆ ಜನಕ್ಕಿರುವ ಅಭಿಪ್ರಾಯವನ್ನು ಹೇಳಲಿದೆ.

ತಮಿಳುನಾಡಿನ ಮದುರಾಂತಕಮ್, ಧಾರಾಪುರಮ್, ಪುದುಚೇರಿಯ ತಟ್ಟಂಚವಾಡಿ ವಿಧಾನಸಭಾ ಕ್ಷೇತ್ರಳಿಗೆ, ಪಶ್ಚಿಮ ಬಂಗಾಳದ ನಂದಿಗ್ರಾಮ, ರೆಜಿನಗರ್ ಹಾಗೂ ಅಸ್ಸಾಂನ ನಾಗೋನ್ ಲೋಕಸಭಾ ಕ್ಷೇತ್ರಕ್ಕೆ ಇದೇ 6ರಂದು ಮತದಾನ ನಡೆದಿತ್ತು. ಇಂದು ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಭವಿಷ್ಯ ಮದ್ಯಾಹ್ನದೊತ್ತಿಗೆ ನಿರ್ಧಾರವಾಗಲಿದೆ. ಇದು ನಾಯಕರಿಗೆ ಮಹತ್ವದ ಪರೀಕ್ಷೆಯಾಗಿದೆ.

ಸಿಎಂ ವಿಜಯ್​​​​ಗೆ ಅಗ್ನಿ ಪರೀಕ್ಷೆ

ತಮಿಳುನಾಡಿನ ಮಧುರಾಂತಕಂ ಮತ್ತು ಧಾರಾಪುರಂ ಕ್ಷೇತ್ರಗಳ AIADMK ಶಾಸಕಿಯರಾದ ಕೆ. ಮರಗತಂ ಕುಮಾರವೇಲ್ ಮತ್ತು ಪಿ. ಸತ್ಯಭಾಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಟ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಪಕ್ಷಾಂತರಗೊಂಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಅಕ್ಟೋಬರ್ 6 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗುತ್ತಿದೆ. ಏಪ್ರಿಲ್‌ನಲ್ಲಿ TVK ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಬೈಪೋಲ್ ಇದಾಗಿದ್ದು, ಇದನ್ನು ಸಿಎಂ ವಿಜಯ್ ಅವರಿಗೆ ಪ್ರತಿಷ್ಠೆಯ ಕಣ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳ ಉಪಚುನಾವಣೆ ನಡೆದು, ಇಂದು ಮತ ಎಣಿಕೆ ಕಾರ್ಯ ಆರಂಭವಾಗಿದೆ. ಸದ್ಯ ಹೀನಾಯವಾಗಿ ಸೋಲನ್ನು ಕಂಡ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತೆ ಗೆಲುವಿನ ನಗೆ ಬೀರುವ ನಿರೀಕ್ಷೆಯಲ್ಲಿದೆ. ಆ ಮೂಲಕ ಇನ್ನೂ ಬಂಗಾಳದಲ್ಲಿ ಟಿಎಂಸಿಯ ಪ್ರಭಾವ ಇದೆಯಾ ಎನ್ನುವುದು ತಿಳಿಯಲಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಧಿಕಾರದ ಚುಕ್ಕಾಣಿ ಹಿಡಿದಿರುವ ಸುವೇಂಧು ಅಧಿಕಾರಿಯವರಿಗೆ ಗೆಲವು ಪ್ರತಿಷ್ಠೆಯ ಕಣವಾಗಿದೆ.

ಬಿಜೆಪಿ ಪರವಾಗಿ ಹಸಿರಾಣಿ ರಾಥ್ ಸ್ಪರ್ಧಿಸಿದ್ದಾರೆ, ಸಿಎಂ ಸುವೇಂದು ಅಧಿಕಾರಿ ಈ ಹಿಂದೆ ಇಲ್ಲಿ ಗೆಲುವು ಸಾಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಶೇ. 80ಕ್ಕೂ ಅಧಿಕ ಮತದಾನವಾಗಿದ್ದು, ಕಾಂಗ್ರೆಸ್ ಮರುಮತದಾನಕ್ಕೆ ಒತ್ತಾಯಿಸಿತ್ತು.

ಇದನ್ನೂ ಓದಿ: ಇನ್ನೂ ಒಬ್ರು ಸಿಗೋವರೆಗೂ ಕಾಯಬೇಕು! ಮುಖೇಶ್​ ಅಂಬಾನಿ ಬಗ್ಗೆ ಮಸ್ಕ್ ತುಟಿಬಿಚ್ಚಿದ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್​ | Rahul Gandhi

ಅಸ್ಸಾಂ

ಅಸ್ಸಾಂನ ಮುಸ್ಲಿಂ ಬಾಹುಳ್ಯದ ನಾಗಾಂವ್ ಲೋಕಸಭಾ ಉಪಚುನಾವಣೆಯು ಬಿಜೆಪಿ, ಕಾಂಗ್ರೆಸ್ ಮತ್ತು ಎಐಯುಡಿಎಫ್ ಪಕ್ಷಗಳಿಗೆ ಅತ್ಯಂತ ನಿರ್ಣಾಯಕವಾಗಿದೆ. ಬಿಜೆಪಿಯಿಂದ ದೇವಶಿಶ್ ಶರ್ಮಾ, ಕಾಂಗ್ರೆಸ್‌ನಿಂದ ಶಿಬಮೋನಿ ಬೋರಾ ಹಾಗೂ ಬದ್ರುದ್ದೀನ್ ಅಜ್ಮಲ್ ಸೇರಿದಂತೆ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪುದುಚೇರಿ

ಪುದುಚೇರಿಯಲ್ಲಿ 4 ತಿಂಗಳ ಎನ್‌ಡಿಎ ಸರ್ಕಾರಕ್ಕೆ ಇದು ಮೊದಲ ಅಗ್ನಿಪರೀಕ್ಷೆಯಾಗಿದೆ. ಸಿಎಂ ಎನ್. ರಂಗಸ್ವಾಮಿ ರಾಜೀನಾಮೆಯಿಂದ ತೆರವಾದ ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ಹಾಗೂ ಡಿಎಂಕೆ ನಡುವೆ ತ್ರಿಕೋನ ಸ್ಪರ್ಧೆ ಇದ್ದು, ಶೇ. 78.83ರಷ್ಟು ಮತದಾನವಾಗಿದೆ, (ಏಜೆನ್ಸೀಸ್).