ಬಂಗಾಳದಲ್ಲಿ ಟಿಎಂಸಿ 'ಗೂಂಡಾಗಿರಿ' ಅಂತ್ಯಕ್ಕೆ ಕೌಂಟ್‌ಡೌನ್ ಶುರು: ಅಮಿತ್ ಷಾ ಸ್ಫೋಟಕ ಭವಿಷ್ಯ! 
ದೇಶ

ಬಂಗಾಳದಲ್ಲಿ ಟಿಎಂಸಿ 'ಗೂಂಡಾಗಿರಿ' ಅಂತ್ಯಕ್ಕೆ ಕೌಂಟ್‌ಡೌನ್ ಶುರು: ಅಮಿತ್ ಷಾ ಸ್ಫೋಟಕ ಭವಿಷ್ಯ! Amit Shah

ಕೋಲ್ಕತ್ತಾ: ಪಶ್ಚಿಮ ಬಂಗಾಳದ 152 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah), ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಷಾ, ಟಿಎಂಸಿಯ ಭ್ರಷ್ಟಾಚಾರ ಮತ್ತು ಗೂಂಡಾಗಿರಿಯ ಸೂರ್ಯ ಈಗ ಮುಳುಗಿದ್ದಾನೆ ಎಂದು ಗುಡುಗಿದ್ದಾರೆ. ಅಲ್ಲದೆ,ಬಂಗಾಳದಲ್ಲಿ ಇತ್ತೀಚಿನ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಎನ್ನಲಾದ ಶೇ. 91.46 ರಷ್ಟು ಮತದಾನ ದಾಖಲಾಗಿರುವುದು ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮೂಡಿಸಿದೆ.
ಮೇ 4ಕ್ಕೆ ದೀದಿ ಆಟ ಮುಕ್ತಾಯ: ಅಮಿತ್ ಷಾ ಗುಡುಗು
ಹೂಗ್ಲಿ ಜಿಲ್ಲೆಯ ಬಾಲಾಘರ್‌ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ್ದ ಅಮಿತ್ ಷಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಗಡಿಯನ್ನು ಸಂಪೂರ್ಣ ಭದ್ರಗೊಳಿಸುವ ಭರವಸೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಬ್ಬನೇ ಒಬ್ಬ ನುಸುಳುಕೋರನೂ ರಾಜ್ಯದೊಳಗೆ ಕಾಲಿಡಲು ಬಿಡುವುದಿಲ್ಲ. ಈಗಾಗಲೇ ಇಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಆಯ್ದು ಹೊರಹಾಕಲಾಗುವುದು ಎಂದು ಎಚ್ಚರಿಸಿದರು.
ಇದು ಬಂಗಾಳದಲ್ಲಿ ನನ್ನ 30ನೇ ಕಾರ್ಯಕ್ರಮವಾಗಿದೆ. ಮತದಾನದ ಪ್ರವೃತ್ತಿಯನ್ನು ನೋಡಿದರೆ ಮೇ 4ರಂದು ಫಲಿತಾಂಶ ಬಂದಾಗ ದೀದಿ ಆಟ ಮುಗಿಯುವುದು ಖಚಿತ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಅಮಿತ್​ ಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ತಿರುಗೇಟು: ಇದು ಬಿಜೆಪಿಯ ಬೆನ್ನುಮೂಳೆ ಮುರಿದ ಮತದಾನ!

ಅಮಿತ್ ಷಾ ಮತ್ತು ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಟಿಎಂಸಿ ವಕ್ತಾರ ಕುನಾಲ್ ಘೋಷ್ ಬಲವಾಗಿ ತಳ್ಳಿಹಾಕಿದ್ದಾರೆ. ಹೆಚ್ಚಿನ ಮತದಾನದ ಪ್ರಮಾಣವು ಬದಲಾವಣೆಯ ಸಂಕೇತವಲ್ಲ, ಬದಲಿಗೆ ಇದು ಮಮತಾ ಬ್ಯಾನರ್ಜಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ಎಂದು ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಾ, ಬಿಜೆಪಿ ಜನರು ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸುತ್ತಿದೆ. ಮೊದಲ ಹಂತದಲ್ಲೇ ಬಂಗಾಳದ ಜನತೆ ಬಿಜೆಪಿಯ ಬೆನ್ನುಮೂಳೆಯನ್ನು ಮುರಿದಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ನಾಲ್ಕನೇ ಅವಧಿಯ ಆಡಳಿತಕ್ಕೆ ಮುನ್ನುಡಿಯಾಗಿದೆ. ಬಂಗಾಳದ ಜನತೆ ಬಿಜೆಪಿಯನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ದಾಖಲೆ ಮತದಾನ: ಅಂಕಿಅಂಶಗಳ ವಿವರ

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮೊದಲ ಹಂತದ 152 ಕ್ಷೇತ್ರಗಳಲ್ಲಿ ಮತದಾನವು ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಒಟ್ಟು ಮತದಾನ: ಶೇ. 91.46 (3.60 ಕೋಟಿ ಮತದಾರರಲ್ಲಿ).
ಬದಲಾವಣೆಯ ಗಾಳಿಯೋ ಅಥವಾ ಬೆಂಬಲವೋ?: ಶೇ. 90 ದಾಟಿದ ಮತದಾನದ ಪ್ರಮಾಣವು ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆಯನ್ನು ಸೂಚಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ, ಟಿಎಂಸಿ ಇದನ್ನು ಮಮತಾ ಪರವಾದ ಅಲೆ ಎಂದು ಬಣ್ಣಿಸುತ್ತಿದೆ.

ಮೇ 4ರ ಫಲಿತಾಂಶದ ಮೇಲೆ ಎಲ್ಲರ ಕಣ್ಣು

ಬಿಜೆಪಿಯು ನುಸುಳುಕೋರರು ಮತ್ತು ಭ್ರಷ್ಟಾಚಾರವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದರೆ, ಟಿಎಂಸಿ ತನ್ನ ಕಲ್ಯಾಣ ಯೋಜನೆಗಳು ಮತ್ತು ಬಂಗಾಳದ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಹೋರಾಡುತ್ತಿದೆ. ಅಮಿತ್ ಶಾ ಅವರ 'ಗೂಂಡಾಗಿರಿ ಅಂತ್ಯ'ದ ಮಾತುಗಳು ಮತ್ತು ಟಿಎಂಸಿಯ 'ನಾಲ್ಕನೇ ಬಾರಿ ಅಧಿಕಾರದ ಆಶಯಗಳಲ್ಲಿ ಯಾವುದು ನಿಜವಾಗಲಿದೆ ಎಂಬುದು ಮೇ 4ರಂದು ಬಹಿರಂಗವಾಗಲಿದೆ.
ಈ ಹಂತದ ಮತದಾನವು ಪಶ್ಚಿಮ ಬಂಗಾಳದ ರಾಜಕೀಯ ದಿಕ್ಕನ್ನು ಬದಲಿಸುವ ಸಾಧ್ಯತೆಯಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಜನರು ಮತಗಟ್ಟೆಗಳಿಗೆ ಧಾವಿಸಿರುವುದು ದೇಶದ ಪ್ರಜಾಪ್ರಭುತ್ವದ ಶಕ್ತಿಯನ್ನು ಸಾಬೀತುಪಡಿಸಿದೆ,(ಏಜೆನ್ಸೀಸ್).