ದೇಶ

35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election

Tijara Election​​: ರಾಜಸ್ಥಾನದ ತಿಜಾರಾ ಪುರಸಭೆ ಅಧ್ಯಕ್ಷರ ಚುನಾವಣೆ ಒಂದು ರೀತಿಯಲ್ಲಿ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ರೋಚಕ ಕದನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದೇ ಒಂದು ಮತದ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

Tijara Election​​: ರಾಜಸ್ಥಾನದ ತಿಜಾರಾ ಪುರಸಭೆ ಅಧ್ಯಕ್ಷರ ಚುನಾವಣೆ ಒಂದು ರೀತಿಯಲ್ಲಿ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ರೋಚಕ ಕದನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದೇ ಒಂದು ಮತದ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಕೌನ್ಸಿಲರ್‌ಗಳನ್ನು ಹಿಮಾಚಲ ಪ್ರದೇಶಕ್ಕೆ ಕರೆದೊಯ್ದದ್ದು, ಮತಗಟ್ಟೆಗೆ ತಡರಾತ್ರಿ ಧಾವಿಸಿದ್ದು, ಪೊಲೀಸರ ಹಸ್ತಕ್ಷೇಪದ ಆರೋಪಗಳು, ಬೌನ್ಸರ್‌ಗಳೊಂದಿಗಿನ ಗಲಾಟೆ, ಹೈಕೋರ್ಟ್ ಆದೇಶ ಮತ್ತು ತಡರಾತ್ರಿವರೆಗೂ ನಡೆದ ಮತದಾನದ ಬಳಿಕ ಸೋಮವಾರ ರಾತ್ರಿ ಈ ಫಲಿತಾಂಶ ಹೊರಬಿದ್ದಿದೆ.

ಒಟ್ಟು 35 ಸದಸ್ಯ ಬಲದ ತಿಜಾರಾ ಪುರಸಭೆಯಲ್ಲಿ 31 ಜನರು ಪಕ್ಷೇತರರಾಗಿ ಗೆದ್ದಿದ್ದರು. ಕಾಂಗ್ರೆಸ್ ಬಳಿ ಕೇವಲ ಒಬ್ಬರು ಮತ್ತು ಬಿಜೆಪಿ ಬಳಿ ಮೂವರು ಕೌನ್ಸಿಲರ್‌ಗಳಿದ್ದರು. ಹೀಗಾಗಿ, ಅಧ್ಯಕ್ಷ ಗಾದಿ ಯಾರಿಗೆ ಸಿಗಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಪಕ್ಷೇತರರ ಕೈಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ 18 ಪಕ್ಷೇತರ ಕೌನ್ಸಿಲರ್‌ಗಳನ್ನು ಹಿಮಾಚಲ ಪ್ರದೇಶದ ಕಸೋಲ್‌ಗೆ ಕರೆದೊಯ್ದು, ಪಕ್ಷೇತರ ಅಭ್ಯರ್ಥಿ ರಾಮಾವತಾರ್ ಸೈನಿ ಅವರನ್ನು ಕಾಂಗ್ರೆಸ್ ಚಿಹ್ನೆಯಡಿಯಲ್ಲಿ ಅಖಾಡಕ್ಕಿಳಿಸಿತು. ಮತ್ತೊಂದೆಡೆ ಬಿಜೆಪಿಯು 16 ಪಕ್ಷೇತರ ಕೌನ್ಸಿಲರ್‌ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಚುನಾವಣೆಯನ್ನು ಅತ್ಯಂತ ರಣರೋಚಕ ಕದನವನ್ನಾಗಿ ಬದಲಾಯಿಸಿತು.

ಇದನ್ನೂ ಓದಿ:ನನ್ನ ಧರ್ಮದ ಮೇಲೆ ದಾಳಿ ಮಾಡುವ ದೇಶಕ್ಕಾಗಿ ನಾನು ಈ ಸಮವಸ್ತ್ರ ತೊಟ್ಟಿರಲಿಲ್ಲ!...ಹನುಮಾನ್ ವಿಗ್ರಹ ವಿವಾದಕ್ಕೆ ಭಾರತೀಯ ಯೋಧನ ತಿರುಗೇಟು! | Texas Hanuman Statue

ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್​ ನಾಯಕ!

ಚುನಾವಣೆಯ ದಿನದಂದು ಹಿಮಾಚಲ ಪ್ರದೇಶದಿಂದ ಹಿಂತಿರುಗುತ್ತಿದ್ದ ಕಾಂಗ್ರೆಸ್-ಬೆಂಬಲಿತ ಕೌನ್ಸಿಲರ್‌ಗಳನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದರು. ಪಂಚ್‌ಕುಲ ಟೋಲ್ ಪ್ಲಾಜಾ ಬಳಿ 25 ಪೊಲೀಸ್ ವಾಹನಗಳು ಹಾಗೂ ಬೌನ್ಸರ್‌ಗಳು ತಮ್ಮ ದಾರಿಯನ್ನು ತಡೆದು, ಎಲ್ಲಾ ಪಕ್ಷೇತರ ಅಭ್ಯರ್ಥಿಗಳನ್ನು ಹಾಗೂ ಅವರ ಕುಟುಂಬಸ್ಥರನ್ನು ಕರೆದೊಯ್ದರು ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೌನ್ಸಿಲರ್‌ಗಳು ಮತದಾನ ಮಾಡದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಲರಾಮ್ ಯಾದವ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಾರ್ಡ್ 5 ರ ಪಕ್ಷೇತರ ಕೌನ್ಸಿಲರ್ ಬಬಿತಾ ಸೈನಿ ಮತ್ತು ವಾರ್ಡ್ 18 ರ ಕೌನ್ಸಿಲರ್ ಹೇಮಲತಾ ಸೈನಿ ಕೂಡ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಪೊಲೀಸರು ಬಸ್ ಹತ್ತಿ ಬಲವಂತವಾಗಿ ಇಳಿಸಲು ಯತ್ನಿಸಿದರು ಹಾಗೂ ತಮ್ಮನ್ನು ರೆಸಾರ್ಟ್‌ಗೆ ಕರೆದೊಯ್ದು ಗನ್ ತೋರಿಸಿ ಬೆದರಿಕೆ ಹಾಕಿ, ಶೌಚಾಲಯಕ್ಕೂ ಹೋಗಲು ಬಿಡದೆ ಬಂಧಿಸಿಟ್ಟಿದ್ದರು ಎಂದು ಆರೋಪಿಸಿದ್ದಾರೆ. ಕೊನೆಗೆ ಕಾಂಗ್ರೆಸ್ ನಾಯಕರ ನೆರವಿನಿಂದ ತಾವು ಹೊರಬಂದಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಈ ಎಲ್ಲಾ ಆರೋಪಗಳನ್ನು ಪಂಚ್‌ಕುಲ ಪೊಲೀಸರು ಸಂಪೂರ್ಣವಾಗಿ ನಿರಾಕರಿಸಿದ್ದು, ತಾವು ಕೇವಲ ಕೌನ್ಸಿಲರ್‌ಗಳ ಸ್ಥಳ ಪತ್ತೆಹಚ್ಚಲು ಯತ್ನಿಸುತ್ತಿದ್ದೆವೇ ಹೊರತು ಯಾರನ್ನೂ ತಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೌನ್ಸಿಲರ್‌ಗಳು ಬರುವುದು ತಡವಾದ ಕಾರಣ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಯ್ತು. ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಳ್ಳಬೇಕಿದ್ದ ಮತದಾನದ ಗಡುವನ್ನು ಹೈಕೋರ್ಟ್ ಸೂಚನೆ ಮೇರೆಗೆ ರಾತ್ರಿ 8 ಗಂಟೆಗೆ ಮತ್ತು ನಂತರ ರಾತ್ರಿ 10 ಗಂಟೆಯವರೆಗೆ ವಿಸ್ತರಿಸಲಾಯಿತು. ಒಂದೊಂದಾಗಿ ಕೌನ್ಸಿಲರ್‌ಗಳು ರಾತ್ರಿ 9:45 ರ ವೇಳೆಗೆ ಮತಗಟ್ಟೆ ತಲುಪಿ ಮತದಾನ ಮಾಡಿದರು. ಅಂತಿಮವಾಗಿ ಚಲಾವಣೆಯಾದ 35 ಮತಗಳಲ್ಲಿ 1 ಮತ ಅಸಿಂಧುಗೊಂಡರೆ, ಕಾಂಗ್ರೆಸ್ ಬೆಂಬಲಿತ ರಾಮಾವತಾರ್ ಸೈನಿ 18 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಸುಭಾಷ್ ಚಂದ್ ಸೈನಿ 16 ಮತಗಳನ್ನು ಪಡೆದು ಪರಾಭವಗೊಂಡರು(ಏಜೆನ್ಸೀಸ್​).