NDA Counters Rahul | ರಾಹುಲ್ ಗಾಂಧಿಗೆ ಎನ್‌ಡಿಎ ನಾಯಕರ ತಿರುಗೇಟು! 
ದೇಶ

ವಾಂಗ್ಚುಕ್ ಮೇಲೆ ಕಾಳಜಿ ಇದ್ದರೆ ಯುರೋಪ್ ಪ್ರವಾಸ ಅರ್ಧಕ್ಕೆ ನಿಲ್ಲಿಸಿ ಬರಬೇಕಿತ್ತು!...ರಾಹುಲ್ ಗಾಂಧಿಗೆ ಎನ್‌ಡಿಎ ನಾಯಕರ ತಿರುಗೇಟು! | NDA Counters Rahul

ನವದೆಹಲಿ: ಸೋನಮ್ ವಾಂಗ್ಚುಕ್​ರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಎನ್‌ಡಿಎ ಒಕ್ಕೂಟದ ನಾಯಕರು ಭಾನುವಾರ ತಿರುಗೇಟು (NDA Counters Rahul) ನೀಡಿದ್ದಾರೆ. ರಾಹುಲ್ ಗಾಂಧಿಗೆ ನಿಜವಾಗಿಯೂ ವಾಂಗ್ಚುಕ್​ ಬಗ್ಗೆ ಕಾಳಜಿ ಇದ್ದಿದ್ದರೆ, ತಮ್ಮ ವಿದೇಶಿ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಅವರನ್ನು ಭೇಟಿಯಾಗಬೇಕಿತ್ತು ಎಂದಿದ್ದಾರೆ.
ಜಂತರ್ ಮಂತರ್‌ನಲ್ಲಿ 20 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸೋನಮ್ ವಾಂಗ್ಚುಕ್​ರನ್ನು​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಸತ್ಯ ಮತ್ತು ಹಿಂಸೆಯ ರಾಜಕಾರಣ ಎಂದು ರಾಹುಲ್ ಗಾಂಧಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಟೀಕಿಸಿದ್ದರು. ಈ ಹೇಳಿಕೆಗೆ ಈಗ ಆಡಳಿತ ಪಕ್ಷದ ನಾಯಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ರಾಹುಲ್‌ಗೆ ನೆಹರೂ ಕುಟುಂಬದ ಹಕ್ಕು ಮಾತ್ರ ಗೊತ್ತು: ಗಿರಿರಾಜ್ ಸಿಂಗ್

ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ರಾಹುಲ್ ಗಾಂಧಿ ವಂಶಪಾರಂಪರ್ಯ ರಾಜಕಾರಣದ ಸಂಕೇತ ಎಂಬುದನ್ನು ಇಡೀ ದೇಶ ಮತ್ತು ಜಗತ್ತು ಬಲ್ಲದು. ನೆಹರೂ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರಿಗೂ ರಾಜಕೀಯ ಮಾಡುವ ಹಕ್ಕಿಲ್ಲ ಎಂದು ಅವರು ಭಾವಿಸಿದ್ದಾರೆ. ಹಿಂದುಳಿದ ಜಾತಿಗೆ ಸೇರಿದ, ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬರು ಪ್ರಧಾನಿಯಾಗಲು ಹೇಗೆ ಸಾಧ್ಯ ಎಂಬ ನೋವು ರಾಹುಲ್ ಅವರನ್ನು ಕಾಡುತ್ತಿದ್ದು, ಆದ್ದರಿಂದಲೇ ತಮ್ಮ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಭಾರತದ ವಿರುದ್ಧ ಮಾತನಾಡುತ್ತಾರೆ ಮತ್ತು ಪ್ರಧಾನಿಯವರನ್ನು ನಿಂದಿಸುತ್ತಾರೆ ಎಂದು ಆರೋಪಿಸಿದರು.

ಸೋನಮ್ ಉಪವಾಸದಲ್ಲಿದ್ದಾಗ ರಾಹುಲ್ ಯುರೋಪ್‌ನಲ್ಲಿ: ಶಹನವಾಜ್ ಹುಸೇನ್

ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ಮಾತನಾಡಿ, ಸೋನಮ್ ವಾಂಗ್‌ಚುಕ್ ಜಂತರ್ ಮಂತರ್‌ನಲ್ಲಿ ಉಪವಾಸದಲ್ಲಿದ್ದಾಗ ರಾಹುಲ್ ಗಾಂಧಿ ಯುರೋಪ್‌ನಲ್ಲಿದ್ದರು. ಅಷ್ಟೊಂದು ಕಾಳಜಿ ಇದ್ದಿದ್ದರೆ ಅವರು ತಮ್ಮ ಯುರೋಪ್ ಪ್ರವಾಸವನ್ನು ಮೊಟಕುಗೊಳಿಸಿ ಬರಬಹುದಿತ್ತು. ಭಾರತಕ್ಕೆ ಮರಳಿದ ನಂತರವೂ ಅವರು ಉತ್ತರಾಖಂಡಕ್ಕೆ ಹೋದರು. ಈಗ ಜನರು ಪ್ರಶ್ನಿಸುತ್ತಿರುವುದರಿಂದ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಟ್ವೀಟ್ ಮಾಡುತ್ತಿದ್ದಾರೆ ಎಂದರು. ಅಲ್ಲದೆ, ಹೈಕೋರ್ಟ್ ನಿರ್ದೇಶನದಂತೆ ವಾಂಗ್ಚುಕ್​ ಆರೋಗ್ಯದ ಹಿತದೃಷ್ಟಿಯಿಂದ ಮಾತ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂಸೆಯ ಮೂಲಕ ಆಡಳಿತ ನಡೆಸಿದ್ದು ಕಾಂಗ್ರೆಸ್: ಶ್ಯಾಮ್ ರಜಾಕ್

ಜೆಡಿಯು ಶಾಸಕ ಶ್ಯಾಮ್ ರಜಾಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಾ, 1974ರಲ್ಲಿ ಯಾರು ಅಧಿಕಾರದಲ್ಲಿದ್ದರು..? ಪಂಜಾಬ್‌ನ ಆಪರೇಷನ್ ಬ್ಲೂ ಸ್ಟಾರ್ ಸಮಯದಲ್ಲಿ ಯಾರು ಅಧಿಕಾರದಲ್ಲಿದ್ದರು..? ಇವರೇ ಹಿಂಸೆಯ ಮೂಲಕ ಅಧಿಕಾರದಲ್ಲಿದ್ದವರು. ನಮ್ಮಂತಹವರನ್ನು ಜೈಲಿಗೆ ಕಳುಹಿಸಿ, ಅನೇಕರನ್ನು ಕೊಂದವರು ಇವರು. ಈಗ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪಾಲಿಸುವವರ ಮೇಲೆ ಹಿಂಸೆಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸರ್ವಾಧಿಕಾರವನ್ನೇ ಪ್ರಜಾಪ್ರಭುತ್ವ ಎಂದು ಭಾವಿಸಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸಮರ್ಥನೆ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಎನ್‌ಡಿಎ ನಾಯಕರ ಈ ವಾಗ್ದಾಳಿಗೆ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೇಶಾದ್ಯಂತ ಇರುವ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಮತ್ತು ಸೋನಮ್ ವಾಂಗ್ಚುಕ್​ ಇಬ್ಬರೂ ವಿದ್ಯಾರ್ಥಿಗಳಿಗಾಗಿಯೇ ಹೋರಾಡುತ್ತಿದ್ದು, ವಾಂಗ್ಚುಕ್​ರನ್ನು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದರು.
ಬಿಜೆಪಿಗೆ ವಾಂಗ್‌ಚುಕ್ ಅವರ ಮೇಲೆ ಅಷ್ಟೊಂದು ಸಹಾನುಭೂತಿ ಇದ್ದರೆ, ಅವರೊಂದಿಗೆ ಮಾತುಕತೆ ನಡೆಸಲಿ ಮತ್ತು ನೀಟ್ ಪೇಪರ್ ಸೋರಿಕೆ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಲಿ ಎಂದು ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್​).