Kiren Rijiju | ಕೇಂದ್ರ ಸಚಿವ ಕಿರಣ್ ರಿಜಿಜು 
ದೇಶ

ಅಮಿತ್ ಷಾ ಭಾಷಣದ ಮಧ್ಯೆ ವಿಪಕ್ಷಗಳ ಸಭಾತ್ಯಾಗ; ಕಾಂಗ್ರೆಸ್‌ನ ಸುಳ್ಳು ಬಹಿರಂಗವಾಗಿದೆ ಎಂದು ಸಚಿವ ರಿಜಿಜು ಕಿಡಿ | Kiren Rijiju

ದೆಹಲಿ: ಬುಧವಾರ (ಡಿ.10) ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಷಾ ಭಾಷಣದ ಮಧ್ಯೆ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿರುವುದು ಎಸ್‌ಐಆರ್ ಬಗ್ಗೆ ಕಾಂಗ್ರೆಸ್‌ನ ಸುಳ್ಳುಗಳನ್ನು ಬಹಿರಂಗಪಡಿಸಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ರಿಜಿಜು, ಚುನಾವಣಾ ಸುಧಾರಣೆಗಳ ಸುತ್ತಲಿನ ಸುಳ್ಳು ನಿರೂಪಣೆ ಕುಸಿದಿದ್ದು, ಕಾಂಗ್ರೆಸ್​​ನ ನೈಜ ಮುಖ ಅನಾವರಣಗೊಂಡಿದೆ. ಚುನಾವಣಾ ಆಯೋಗದ ಮೇಲಿನ ನಂಬಿಕೆ ಹಾಗೆಯೇ ಉಳಿದಿದ್ದು, ಆದರೆ ಕಾಂಗ್ರೆಸ್‌ನ ತಪ್ಪು ಮಾಹಿತಿ ಅಪಖ್ಯಾತಿಗೊಳಗಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ನಡುವಿನ ಮಾತಿನ ಸಂಘರ್ಷದ ಬಳಿಕ ಬುಧವಾರ ನಡೆದ ಪ್ರತಿಪಕ್ಷಗಳ ವಾಕ್‌ಔಟ್ ಉಲ್ಲೇಖಿಸಿದ ರಿಜಿಜು, ಎಸ್‌ಐಆರ್ ಕುರಿತಾದ ಗೃಹ ಸಚಿವರ ಸತ್ಯ ಭಾಷಣವನ್ನು ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕರು ಸಹಿಸಿಕೊಳ್ಳಲಾರದೆ ಹೊರನಡೆದರು, ನೆಪ ಹೇಳಿದರು ಎಂದು ರಿಜಿಜು ಆರೋಪಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಸೇರಿದಂತೆ ಇತರ ವಿಧಾನಸಭಾ ಚುನಾವಣೆಗಳಲ್ಲಿ, ಪ್ರತಿಪಕ್ಷಗಳು ಮತ್ತೆ ಅದೇ ವಿಷಯಗಳನ್ನು ಎತ್ತಿದರೂ, ಈ ಬೆಳವಣಿಗೆಯ ಬಳಿಕ ಜನರು ಅದನ್ನು ನಂಬುವುದಿಲ್ಲ ಎಂದಿರುವ ರಿಜಿಜು, ಎಸ್‌ಐಆರ್ ಸಮಸ್ಯೆಯಿಂದಾಗಿ ಮಳೆಗಾಲದ ಅಧಿವೇಶನ ರದ್ದಾಯಿತು, ಚಳಿಗಾಲದ ಅಧಿವೇಶನದಲ್ಲೂ ಎರಡು ದಿನಗಳು ಇದೇ ಪರಿಸ್ಥಿತಿ ಎದುರಿಸಬೇಕಾಯಿತು ಎಂದರು.
ತಾಂತ್ರಿಕವಾಗಿ ನಮಗೆ ಬಹುಮತ ಇರುವುದರಿಂದ ವಿರೋಧ ಪಕ್ಷವಿಲ್ಲದೆಯೇ ನಾವು ನಮ್ಮ ಮಸೂದೆಗಳನ್ನು ಅಂಗೀಕರಿಸಬಹುದು, ಆದರೆ ಶಾಸಕಾಂಗ ಚರ್ಚೆಯ ಉತ್ಸಾಹದಲ್ಲಿ ಅವರು ಭಾಗವಹಿಸಬೇಕೆಂದು ನಮ್ಮ ಬಯಕೆ ಎಂದರು. ಬುಧವಾರ ಅಮಿತ್ ಷಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಷಾ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಸಂಸದರು, ಮತ ಕಳ್ಳತನದ ಆರೋಪದ ಕುರಿತು ಚರ್ಚೆಗೆ ಸವಾಲು ಹಾಕಿದರು. ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚಿಸುತ್ತಿದ್ದಾಗ ಈ ಮಾತಿನ ಸಂಘರ್ಷ ನಡೆಯಿತು(ಏಜೆನ್ಸೀಸ್​).