Mamata Banerjee | ಮಮತಾ ಕಾರ್ ಮೇಲೆ ಭೀಕರ ದಾಳಿ; ತಲೆ ಒಡೆದು ಹೆಣವಾಗುತ್ತಿದ್ದೆ ಎಂದ ದೀದಿ!
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಭಾನುವಾರ ಉತ್ತರ 24 ಪರಗಣ ಜಿಲ್ಲೆಯ ಬಿಜಾಪುರದಲ್ಲಿ ಮೃತ ಟಿಎಂಸಿ ಕಾರ್ಯಕರ್ತನ ನಿವಾಸಕ್ಕೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ತೀವ್ರ ಪ್ರತಿಭಟನೆಯನ್ನು ಎದುರಿಸಿದ್ದಾರೆ. ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರ ಗುಂಪು ದೀದಿ ವಾಹನವನ್ನು ಸುತ್ತುವರಿದು, ಚೋರ್ (ಕಳ್ಳ) ಎಂದು ಘೋಷಣೆಗಳನ್ನು ಕೂಗಿದೆ ಹಾಗೂ ಅವರ ಕಾರಿನ ಮೇಲೆ ಕಲ್ಲು ಮತ್ತು ಕೆಸರನ್ನು ಎರಚಿದೆ ಎಂದು ಆರೋಪಿಸಲಾಗಿದೆ.
ಘಟನೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಬ್ಯಾನರ್ಜಿ, ತಮ್ಮ ವಾಹನದ ಮೇಲೆ ಕಲ್ಲು, ಶೂ ಹಾಗೂ ಕೆಸರಿನಿಂದ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದು, ತಮ್ಮ ಭೇಟಿಯ ಕುರಿತು ಮುಂಚಿತವಾಗಿಯೇ ತಿಳಿಸಿದ್ದರೂ ಸಹ ಸೂಕ್ತ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಇದು ಗೂಢಚರ್ಯೆ ಅಥವಾ ಸಂಚು ಹೊರತು ಮತ್ತೇನೂ ಅಲ್ಲ. ನಾನು ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ, ಆದಾಗ್ಯೂ ಪೊಲೀಸರು ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇಡೀ ಪಶ್ಚಿಮ ಬಂಗಾಳವನ್ನು ಗೂಂಡಾಗಳು ನಿಯಂತ್ರಿಸುತ್ತಿದ್ದಾರೆ ಎಂದು ದೀದಿ ಆರೋಪಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ದಾಳಿ!...
ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲೇ ತಮ್ಮ ವಾಹನದ ಮೇಲೆ ದೊಡ್ಡ ದೊಡ್ಡ ಕಲ್ಲುಗಳನ್ನು ತೂರಲಾಗಿದೆ ಎಂದು ಆರೋಪಿಸಿದ್ದು, ಈ ದಾಳಿಯಿಂದ ತೀವ್ರ ಗಾಯಗಳಾಗುವ ಸಾಧ್ಯತೆಯಿತ್ತು ಎಂದು ಪ್ರತಿಪಾದಿಸಿದ್ದಾರೆ. ಪೊಲೀಸರ ಕಣ್ಣೆದುರೇ ಸಮಾಜವಿರೋಧಿ ಶಕ್ತಿಗಳು ನನ್ನ ಕಾರಿನ ಮೇಲೆ ದೊಡ್ಡ ಕಲ್ಲುಗಳನ್ನು ತೂರಿದ್ದಾರೆ. ವಾಹನದ ಮೇಲಿನ ದಾಳಿ ಎಷ್ಟೊಂದು ಭೀಕರವಾಗಿತ್ತೆಂದರೆ, ಒಂದು ವೇಳೆ ಕಿಟಕಿಗಳು ತೆರೆದಿದ್ದರೆ ನನ್ನ ತಲೆ ಒಡೆದು ಹೋಗುತ್ತಿತ್ತು. ನಾವೆಲ್ಲರೂ ಕೊಲ್ಲಲ್ಪಡಬಹುದಿತ್ತು. ಇದು ಪೊಲೀಸರ ಎದುರಲ್ಲೇ ನಡೆದಿದೆ. ನಾನು ಇಂತಹದ್ದನ್ನು ಎಂದೂ ನೋಡಿರಲಿಲ್ಲ. ಇಲ್ಲೇನು ನಡೆಯುತ್ತಿದೆ..? ಪೊಲೀಸರು ಬಿಜೆಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಶಾಂತಿಯುತ ಪ್ರದೇಶವನ್ನು ಹಾಳುಮಾಡಲು ಬ್ಯಾನರ್ಜಿ ಬಂದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ದೀದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಹಾಲಿಸಹರ್ ಪೊಲೀಸ್ ವಶದಲ್ಲಿದ್ದಾಗ ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದರೆನ್ನಲಾದ ಟಿಎಂಸಿ ಕಾರ್ಯಕರ್ತನ ನಿವಾಸಕ್ಕೆ ಅವರು ತೆರಳುತ್ತಿದ್ದರು.
ದೀದಿ ಮೇಲಿನ ದಾಳಿಯನ್ನು ಖಂಡಿಸಿದ ಬಿಜೆಪಿ
ಏತನ್ಮಧ್ಯೆ, ಮಮತಾ ಬ್ಯಾನರ್ಜಿ ಕಾರಿನ ಮೇಲೆ ನಡೆದ ದಾಳಿಯನ್ನು ಬಿಜೆಪಿ ಖಂಡಿಸಿದ್ದು, ಇದರಲ್ಲಿ ತಮ್ಮ ಕಾರ್ಯಕರ್ತರ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿದೆ. ಘಟನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಮಾಜಿ ಮುಖ್ಯಮಂತ್ರಿಗಳ ವಾಹನದ ಮೇಲೆ ಯಾರೇ ಕಲ್ಲು, ಕೆಸರು ಅಥವಾ ಚಪ್ಪಲಿ ಎಸೆಯುವುದನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಭವಿಷ್ಯದಲ್ಲಿ ರಾಜ್ಯದ ಹೆಸರಿಗೆ ಧಕ್ಕೆ ತರುತ್ತವೆ ಎಂದಿರುವ ಭಟ್ಟಾಚಾರ್ಯ, ವಿಪಕ್ಷಗಳ ಆರೋಪ ನಿಜವಾಗಿದ್ದರೆ, ಸಿಎಂ ಸುವೇಂದು ಅಧಿಕಾರಿ ಮತ್ತು ಪೊಲೀಸ್ ಪಡೆ ತಕ್ಷಣದ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಇದು ಬಿಜೆಪಿ ಸಂಸ್ಕೃತಿಯಲ್ಲ ಎಂದ ಸಚಿವೆ ಪೌಲ್
ಈ ವಿಚಾರವಾಗಿ ಮಾತನಾಡಿದ ರಾಜ್ಯ ಸಚಿವೆ ಅಗ್ನಿಮಿತ್ರಾ ಪೌಲ್, ಅವರು ಕಳೆದ 14 ವರ್ಷಗಳಲ್ಲಿ ಏನೇ ಮಾಡಿರಲಿ, ನಾನು ಈ ಹೊಸ ಸರ್ಕಾರಿ ತಂಡದ ಸದಸ್ಯೆ ಮತ್ತು ಮುಖ್ಯಮಂತ್ರಿಯ ಬೆಂಬಲಿಗರು. ನಾನಾಗಲಿ, ನಮ್ಮ ಪಕ್ಷವಾಗಲಿ ಅಥವಾ ನಮ್ಮ ಸರ್ಕಾರವಾಗಲಿ ಹಿಂಸಾಚಾರ, ದುರ್ವರ್ತನೆ ಅಥವಾ ಕೆಸರು, ಶಾಯಿ ಅಥವಾ ಶೂ ಎಸೆಯುವಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಈ ರೀತಿಯಾಗಿ ವರ್ತನೆ ಮಾಡುವುದು ನಮ್ಮ ಸಂಸ್ಕೃತಿಯ ಭಾಗವಾಗಲು ಸಾಧ್ಯವಿಲ್ಲ ಎಂದಿರುವ ಪೌಲ್, ಮಮತಾ ಬ್ಯಾನರ್ಜಿ ಅನೇಕ ತಪ್ಪುಗಳನ್ನು ಮಾಡಿರಬಹುದು, ಆದರೆ ನಾವು ಇಂತಹ ನಡವಳಿಕೆಯನ್ನು ಎಂದಿಗೂ ಬೆಂಬಲಿಸಲು ಸಾಧ್ಯವಿಲ್ಲ, ವಿಶೇಷವಾಗಿ ಒಬ್ಬ ಮಹಿಳೆ ಮತ್ತು ಹಿರಿಯ ಮಹಿಳೆಯ ವಿರುದ್ಧ. ನಾವು ಇದನ್ನು ಬೆಂಬಲಿಸುವುದಿಲ್ಲ. ಬಿಜೆಪಿಯ ಪ್ರತಿನಿಧಿ ಎಂದು ಹೇಳಿಕೊಂಡು ಯಾರಾದರೂ ಇಂತಹ ಕೆಲಸಗಳನ್ನು ಮಾಡುತ್ತಿದ್ದರೆ, ಅವರು ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ