Idli Vs Rasgulla | ರಸಗುಲ್ಲಾ ಅಂದರೆ ಸಕ್ಕರೆ ಪಾಕದಲ್ಲಿರೋ ಇಡ್ಲಿನಾ?
Idli Vs Rasgulla: ಸಾಮಾಜಿಕ ಜಾಲತಾಣ ಎಕ್ಸ್ ವೇದಿಕೆಯಲ್ಲಿ ಸದ್ಯ ಇಡ್ಲಿ ಹಾಗೂ ರಸಗುಲ್ಲಾ ಕುರಿತಾದ ಸ್ವಾರಸ್ಯಕರ ಚರ್ಚೆಯೊಂದು ಭಾರಿ ಸದ್ದು ಮಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರೊಬ್ಬರು ರಸಗುಲ್ಲಾವನ್ನು ಸಕ್ಕರೆ ಪಾಕದಲ್ಲಿ ಅದ್ದಿದ ಇಡ್ಲಿ ಎಂದು ವಿಲಕ್ಷಣವಾಗಿ ಹೋಲಿಕೆ ಮಾಡಿದ್ದರಿಂದ ಈ ಆನ್‌ಲೈನ್ ಚರ್ಚೆ ಆರಂಭವಾಗಿತ್ತು.
ಈ ಸಾಮಾನ್ಯ ಆಹಾರದ ಚರ್ಚೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಎಂಟ್ರಿ ಕೊಟ್ಟು, ತಮ್ಮ ವಿಶಿಷ್ಟ ಕಠಿಣ ಭಾಷಾ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಈ ಸುದ್ದಿ ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ. ಈ ಹಾಸ್ಯಭರಿತ ಸಂಭಾಷಣೆಯು ನೆಟ್ಟಿಗರ ಗಮನ ಸೆಳೆದಿದ್ದಲ್ಲದೆ, ಎರಡೂ ಖಾದ್ಯಗಳ ಪರವಾಗಿ ತರೂರ್ ನೀಡಿದ ವಿಸ್ತೃತ ಸಮರ್ಥನೆ ಭಾರಿ ಸದ್ದು ಮಾಡುತ್ತಿದೆ.
ರಸಗುಲ್ಲಾ ಅಂದರೆ ಸಕ್ಕರೆ ಪಾಕದಲ್ಲಿರುವ ಇಡ್ಲಿ
ಟ್ವಿಟರ್ ಬಳಕೆದಾರರಾದ @crazyxedi ಎಂಬುವವರು ರಸಗುಲ್ಲಾವನ್ನು ಇದುವರೆಗಿನ ಅತ್ಯಂತ ಓವರ್‌ರೇಟೆಡ್ (ಅತಿಯಾದ ಪ್ರಚಾರ ಪಡೆದ) ಸಿಹಿ ತಿಂಡಿ ಎಂದು ಬರೆದು ಪೋಸ್ಟ್ ಮಾಡಿದ್ದರು. ಸಾಯಂತಿಕಾ ಎಂಬ ಮತ್ತೊಬ್ಬ ಬಳಕೆದಾರರು, ಬಂಗಾಳದ ಪ್ರಸಿದ್ಧ ತಿಂಡಿಗಳಾದ ಮಿಷ್ಟಿ ದೋಯಿ ಮತ್ತು ನೋಲೆನ್ ಗುರೆರ್ ರಸಗುಲ್ಲಾ ರುಚಿಯನ್ನು ಬಂಗಾಳಿಯೇತರ ಜನರಿಗೆ ವಿವರಿಸುವುದು ಹೇಗೆ ಎಂಬ ಪೋಸ್ಟ್‌ಗೆ ಪ್ರತಿಯಾಗಿ ಈ ಹೋಲಿಕೆ ಮಾಡಲಾಗಿತ್ತು. ಇದು ನೋಡನೋಡುತ್ತಿದ್ದಂತೆ ಪ್ರಾದೇಶಿಕ ಆಹಾರ ಪ್ರಿಯರ ನಡುವೆ ತೀವ್ರ ಚರ್ಚೆ ಹಾಗೂ ಮೀಮ್ಸ್‌ಗಳ ಆನ್‌ಲೈನ್ ಸಂಘರ್ಷಕ್ಕೆ ಕಾರಣವಾಯಿತು.
ವಿಶ್ವವಿಜ್ಞಾನದ ತಪ್ಪು ಗ್ರಹಿಕೆ ಎಂದ ಶಶಿ ತರೂರ್
ಈ ವೈರಲ್ ಹೋಲಿಕೆಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, ರಸಗುಲ್ಲಾವನ್ನು ಇಡ್ಲಿಗೆ ಹೋಲಿಸುವುದು ಕೇವಲ ಅಡುಗೆಯ ತಪ್ಪು ಮಾತ್ರವಲ್ಲ, ಇದು ಬ್ರಹ್ಮಾಂಡದ ಅಥವಾ ವಿಶ್ವವಿಜ್ಞಾನದ ಅತ್ಯಂತ ಆಳವಾದ ತಪ್ಪು ಗ್ರಹಿಕೆಯಾಗಿದೆ (Cosmological Misunderstanding) ಎಂದು ತಮ್ಮ ಸಾಹಿತ್ಯಿಕ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ. ರಸಗುಲ್ಲಾ ಎನ್ನುವುದು ಹಾಲಿನಿಂದ ತಯಾರಾಗುವ ಮೃದುವಾದ ಛೇನಾ (ಗಟ್ಟಿ ಗಿಣ್ಣು) ಆಗಿದ್ದರೆ, ಇಡ್ಲಿ ಎಂಬುದು ಅಕ್ಕಿ ಮತ್ತು ಉದ್ದಿನಬೇಳೆಯನ್ನು ಹುದುಗಿಸಿ (Ferment) ತಯಾರಿಸುವ ಅತ್ಯಂತ ಜಾಗರೂಕತೆಯ ಖಾರದ ತಿನಿಸಾಗಿದೆ ಎಂದು ವಿವರಿಸಿದ್ದಾರೆ. ಇವೆರಡರ ಸಂಯೋಜನೆ ಸಂಪೂರ್ಣವಾಗಿ ವಿಭಿನ್ನ ಜಗತ್ತಿಗೆ ಸೇರಿದ್ದಾಗಿದೆ ಎಂದು ತರೂರ್ ಬರೆದಿದ್ದಾರೆ.
ತರೂರ್ ಹೈ-ಫೈ ಶೈಲಿಯ ಆಹಾರ ಸಮರ್ಥನೆಗೆ ನೆಟ್ಟಿಗರು ಫಿದಾ!
ಇಡ್ಲಿಯನ್ನು ಬಯೋಟೆಕ್ನಾಲಜಿಯ ಮಾಸ್ಟರ್‌ಕ್ಲಾಸ್ ಎಂದು ಶ್ಲಾಘಿಸಿದ ತರೂರ್, ಇದರ ಹಿಂದಿರುವ ವಿಜ್ಞಾನ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಎತ್ತಿ ತೋರಿಸಿದ್ದಾರೆ. ಇಡ್ಲಿಯು ಸಕ್ಕರೆ ಪಾಕದಲ್ಲಿ ಮುಳುಗಲು ಒಪ್ಪಿಕೊಳ್ಳುತ್ತದೆ ಎಂದು ಭಾವಿಸುವುದೇ ಅದರ ಘನತೆಯನ್ನು ಸಂಪೂರ್ಣವಾಗಿ ತಪ್ಪು ತಿಳಿಯುವುದಾಗಿದೆ ಎಂದು ತರೂರ್ ಬರೆದುಕೊಂಡಿದ್ದಾರೆ. ಒಂದು ಸಾಧಾರಣ ಇಡ್ಲಿ ಮತ್ತು ರಸಗುಲ್ಲಾ ಚರ್ಚೆಯನ್ನು ನಾಗರಿಕತೆ ಹಾಗೂ ಗ್ಯಾಸ್ಟ್ರೋನಮಿಯ ತತ್ವಶಾಸ್ತ್ರದ ಉಪನ್ಯಾಸದಂತೆ ಬದಲಾಯಿಸಿದ ತರೂರ್ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಅವರ ಭಾಷಾ ಶೈಲಿಯನ್ನು ನೋಡಿ ಅಚ್ಚರಿ ಪಡುತ್ತಿದ್ದಾರೆ(ಏಜೆನ್ಸೀಸ್).