Bhagwant Mann | ಭಗವಂತ್ ಮಾನ್ 
ದೇಶ

Bhagwant Mann | ಪಂಜಾಬ್​ ಸಿಎಂ ಶೂ ಕಾಯಲು ಪೊಲೀಸರ ನಿಯೋಜನೆ.?;

ಚಂಡೀಗಢ​: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಮುಕ್ತಸರ್ ಸಾಹಿಬ್ ಗುರುದ್ವಾರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು, ಗುರುದ್ವಾರ ಭೇಟಿಯ ಸಮಯದಲ್ಲಿ ಸಿಎಂ ಪಾದರಕ್ಷೆಗಳಿಗೆ ಕಾವಲು ಕಾಯಲು ಇಬ್ಬರು ಪೊಲೀಸರನ್ನು ನಿಯೋಜಿಸುವ ಅಧಿಕೃತ ಆದೇಶ ಹೊರಬಿದ್ದ ಬಳಿಕ ಈ ನಿರ್ಧಾರ ರಾಜಕೀಯ ತಿರುವು ಪಡೆದುಕೊಂಡಿದೆ.
ಮುಕ್ತಸರ್ ಪೊಲೀಸರು ಹೊರಡಿಸಿರುವ ನಿರ್ದೇಶನದಲ್ಲಿ, ಹೆಡ್ ಕಾನ್‌ಸ್ಟೆಬಲ್ ರೂಪ್ ಸಿಂಗ್ ಮತ್ತು ಕಾನ್‌ಸ್ಟೆಬಲ್ ಸರ್ಬತ್ ಸಿಂಗ್​ರನ್ನು ಪಂಜಾಬ್ ಸಿಎಂ ಮಾನ್​ ಶೂಗಳನ್ನು ಕಾಯಲು ಗೇಟ್ ಸಂಖ್ಯೆ 7 ರಲ್ಲಿ ಸಾಮಾನ್ಯ ಉಡುಪಿನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಕೆಲವೇ ಗಂಟೆಗಳಲ್ಲಿ, ಈ ಆದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರ, ಪೊಲೀಸ್ ಪಡೆಯನ್ನು ವೈಯಕ್ತಿಕ ಸಹಾಯಕರಿಗೆ ಇಳಿಸಿದೆ ಎಂದು ಆರೋಪಿಸಿ ವಿಪಕ್ಷ ನಾಯಕರು ಟೀಕಿಸಿದ್ದಾರೆ.
ಅಮೃತ್ 2.0 ಯೋಜನೆಯಡಿ 138.83 ಕೋಟಿ ರೂ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಗುರು ಗೋಬಿಂದ್ ಸಿಂಗ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ಮಾನ್, ತಮ್ಮ ವಿರುದ್ಧದ ಟೀಕೆಗಳನ್ನು ತಳ್ಳಿಹಾಕಿದರು. ಈ ರಾಜಕೀಯ ವಿರೋಧಿಗಳು ಪಂಜಾಬ್‌ ಅಭಿವೃದಿಗಾಗಿ ಯಾವ ಮಾರ್ಗಸೂಚಿಯನ್ನು ಹೊಂದಿದ್ದಾರೆ?, ನಮ್ಮ ಚಪ್ಪಲಿ ಮತ್ತು ಬೂಟುಗಳು ಅವರಿಗೆ ದೊಡ್ಡ ಸಮಸ್ಯೆಯಂತೆ ಕಾಣುತ್ತಿವೆ ಎಂದು ಹೇಳಿದರು.
ಮುಕ್ತಸರ್ ಸಾಹಿಬ್‌ನಲ್ಲಿ ಘೋಷಿಸಲಾದ ಯೋಜನೆಗಳು ನಗರದ ಹಳೆಯದಾದ ಒಳಚರಂಡಿ ಮತ್ತು ನೀರು ಸರಬರಾಜು ವ್ಯವಸ್ಥೆಗಳನ್ನು ಆಧುನೀಕರಿಸುವುದು ಮತ್ತು ಬೆಳೆಯುತ್ತಿರುವ ನೆರೆಹೊರೆಗಳಲ್ಲಿ ಹೊಸ ಪೈಪ್‌ಲೈನ್‌ಗಳನ್ನು ಹಾಕುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು.

'ವಿಐಪಿ ಸಂಸ್ಕೃತಿ'

ಆಪ್​ ಸರ್ಕಾರದ ಆದೇಶವನ್ನು ಟೀಕಿಸಿರುವ ಕೇಂದ್ರ ಸಚಿವ ರವನೀತ್ ಬಿಟ್ಟು, ಮುಖ್ಯಮಂತ್ರಿಗಳ ಈ ವರ್ತನೆ ಪಂಜಾಬ್‌ನ ಸದ್ಯದ ಪರಿಸ್ಥಿತಿಯನ್ನು ತೋರಿಸುತ್ತದೆ, ಮುಖ್ಯಮಂತ್ರಿಗಳ ಶೂಗಳಿಗೆ ಇಲ್ಲಿ ರಕ್ಷಣೆ ಇಲ್ಲ, ಇನ್ನು ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.? ಎಂದು ಪ್ರಶ್ನಿಸಿದ್ದಾರೆ.
ಇದೇ ದಾಟಿಯಲ್ಲಿ ಮಾತನಾಡಿರುವ ಕಾಂಗ್ರೆಸ್​ ಶಾಸಕ ಪರ್ಗತ್ ಸಿಂಗ್, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡು ಲೇವಡಿ ಮಾಡಿದ್ದು, ಈಗ ಮುಖ್ಯಮಂತ್ರಿಯವರ ಶೂಗಳಿಗೂ ವಿಶೇಷ ಪೊಲೀಸ್ ರಕ್ಷಣೆ ಸಿಗುತ್ತಿದೆಯೇ? ಪಂಜಾಬ್‌ನ ಸಂಸ್ಥೆಗಳು ಮತ್ತು ಜನರ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಸರ್ಕಾರ ಇದೇ ಕಾಳಜಿ ವಹಿಸಿದರೆ ಎಷ್ಟು ಚಂದ ಎಂದಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು, ಎಎಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದ ವಿಪಕ್ಷಗಳು, ಮುಖ್ಯಮಂತ್ರಿ ಮಾನ್ ಇದು ನಿಮ್ಮ "ರಂಗ್ಲಾ ಪಂಜಾಬ್" ಆಗಿದೆಯೇ ಎಂದು ಪ್ರಶ್ನಿಸಿದ್ದವು(ಏಜೆನ್ಸೀಸ್​).