Bihar Cop Suspended 
ದೇಶ

ಬಿಹಾರ ಬಂದ್ ವೇಳೆ ಎಕೆ-47 ಬಳಕೆ, ಮೂವರು ಯುವಕರಿಗೆ ಗಾಯ; ಪೊಲೀಸ್ ಅಧಿಕಾರಿ ಅಮಾನತು...Bihar Cop Suspended

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಬಂದ್ ವೇಳೆ ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್.
  • 15 ವರ್ಷದ ಮೊಹಮ್ಮದ್ ಆರಿಫ್ ಕುತ್ತಿಗೆಗೆ ಗುಂಡು, ಮೂವರಿಗೆ ಗಾಯ, ಪೊಲೀಸ್ ಅಮಾನತು.
  • ಘಟನೆ ಖಂಡಿಸಿ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿಯಿಂದ ಕಠಿಣ ಕ್ರಮಕ್ಕೆ ಆಗ್ರಹ.
Cop seen firing AK-47 at Bihar student protest suspended: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಜುಲೈ.25ರಂದು 'ಬಿಹಾರ ಬಂದ್' ಕೈಗೊಳ್ಳಲಾಗಿತ್ತು. ಈ ವೇಳೆ ಸಿವಾನ್ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಎಕೆ-47 ನಿಂದ ಮೂರು ಸುತ್ತು ಗುಂಡು ಹಾರಿಸಿದ್ದ ಬಿಹಾರದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿದೆ.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಬೇಕು ಎಂದು, ಬಿಹಾರದ ಪ್ರತಿ ಜಿಲ್ಲೆಯಲ್ಲಿಯೂ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ಜೊತೆ ಘರ್ಷಣೆ ನಡೆದಿದೆ. ಜನಸಮೂಹವನ್ನು ಚದುರಿಸಲು ರಾಜ್ಯಾದ್ಯಂತ ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು.
ಫೋನ್​ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯದ ಪ್ರಕಾರ, ಪೊಲೀಸ್ ಕಾನ್​ಸ್ಟೇಬಲ್​ ಒಬ್ಬರು AK-47 ನಿಂದ ಗುಂಡ ಹಾರಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಇದನ್ನು ಬಿಹಾರ ಪೊಲೀಸ್ ಪ್ರಧಾನ ಕಚೇರಿಯು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅಮಾನತು ಆದೇಶ ಹೊರಡಿಸಿದೆ.

ಗಾಯಗೊಂಡವರ ಸ್ಥಿತಿ ಹೇಗಿದೆ?

ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಯಲ್ಲಿ ಗಾಯಗೊಂಡ ಮೂವರು ಪ್ರತಿಭಟನಾಕಾರರಿಗೆ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗಾಯಗೊಂಡವರಲ್ಲಿ ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ಮೊಹಮ್ಮದ್ ಆರಿಫ್ ಕೂಡ ಸೇರಿದ್ದಾರೆ. ಬಂದ್ ಕಾರಣ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದಾಗ, ಕುತ್ತಿಗೆಗೆ ಗುಂಡು ತಗುಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಗುಂಡನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಸದ್ಯ ಅವರ ಆರೋಗ್ಯ ಸುಧಾರಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ತೇಜಸ್ವಿ ಯಾದವ್​ ಹೇಳಿದ್ದೇನು?

ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸೋದು ಎಷ್ಟು ಸರಿ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸುತ್ತಿರುವ ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಎಲ್ಲೆಡೆ ಒಂದೇ ರೀತಿಯ ಧೋರಣೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್ ಹಾಗೂ ಬಿಹಾರದಲ್ಲಿ AK-47 ಬಳಕೆ ಮಾಡಲಾಗುತ್ತಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ.

ಪೊಲೀಸ್​ ಇಲಾಖೆ ಹೇಳಿದ್ದೇನು?

ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ. ಕಾರ್ಯವಿಧಾನ ಉಲ್ಲಂಘನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).