ದೇಶ

ಮಹಾರಾಷ್ಟ್ರದಲ್ಲಿ ಸಹಕಾರಿ ಬ್ಯಾಂಕ್​ಗಳ ಚುನಾವಣೆ: ಬಿಜೆಪಿ ಬಿಟ್ಟು ಕಾಂಗ್ರೆಸ್, ಎನ್​ಸಿಪಿ ಜೊತೆ ಕೈಜೋಡಿಸಿದ ಶಿಂಧೆ ಶಿವಸೇನಾ | Shiv Sena

ಮಹಾರಾಷ್ಟ್ರದ ಎರಡು ಪ್ರಮುಖ ಸಹಕಾರಿ ಬ್ಯಾಂಕುಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ದಿವಂಗತ ಅಜಿತ್ ಪವಾರ್ ಅವರ ಎನ್‌ಸಿಪಿ ಜೊತೆ ಕೈಜೋಡಿಸಿ ಎಲ್ಲರನ್ನೂ ಹುಬ್ಬೇರಿಸಿದೆ.

ಮುಂಬೈ: ಮಹಾರಾಷ್ಟ್ರದ ಎರಡು ಪ್ರಮುಖ ಸಹಕಾರಿ ಬ್ಯಾಂಕುಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ದಿವಂಗತ ಅಜಿತ್ ಪವಾರ್ ಅವರ ಎನ್‌ಸಿಪಿ ಜೊತೆ ಕೈಜೋಡಿಸಿ ಎಲ್ಲರನ್ನೂ ಹುಬ್ಬೇರಿಸಿದೆ.

ಸಾಂಗ್ಲಿ ಮತ್ತು ಸತಾರ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ, ಶಿವಸೇನೆ ಸಾಂಗ್ಲಿಯಲ್ಲಿ ಕಾಂಗ್ರೆಸ್‌ ಜೊತೆ ಮತ್ತು ಸತಾರದಲ್ಲಿ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮಹಾಯುತಿ ಮೈತ್ರಿಕೂಟದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ಮಧ್ಯೆ ಈ ಘಟನೆ ನಡೆದಿದೆ. ಸ್ಥಳೀಯ ರಾಜಕೀಯ ಹಿತಾಸಕ್ತಿಗಳು ಮೈತ್ರಿಯನ್ನು ಮೀರಿಸಿವೆ ಎನ್ನಲಾಗಿದೆ.

ಸಾಂಗ್ಲಿ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಶಿವಸೇನೆ ಕಾಂಗ್ರೆಸ್ ಜೊತೆ ಕೈಜೋಡಿಸಿತು. ಕಾಂಗ್ರೆಸ್‌ನ ಮಹೇಂದ್ರ ಲಾಡ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಶಿವಸೇನೆಯ ತಾನಾಜಿ ಪಾಟೀಲ್ ಉಪಾಧ್ಯಕ್ಷರಾಗಿದ್ದಾರೆ. 22 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರಳಿದೆ.

21 ಸದಸ್ಯರ ಮಂಡಳಿಯಲ್ಲಿ ಆರು ಕಾಂಗ್ರೆಸ್ ನಿರ್ದೇಶಕರು, ಎನ್​ಸಿಪಿ(ಎಸ್​ಪಿ) ಮತ್ತು ಬಿಜೆಪಿ ತಲಾ ಐದು, ಶಿವಸೇನೆಯಿಂದ ಮೂವರು ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯಿಂದ ಇಬ್ಬರು ಸದಸ್ಯರಿದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ, ಕಾಂಗ್ರೆಸ್-ಶಿವಸೇನೆ ಮೈತ್ರಿಯಾಗಿ ಅಧಿಕಾರವನ್ನು ಕೈವಶ ಮಾಡಿಕೊಂಡಿವೆ.

ಸತಾರಾದಲ್ಲೂ ಇದೇ ರೀತಿಯ ಒಪ್ಪಂದವಾಗಿದ್ದು, ಅಲ್ಲಿ ಶಿವಸೇನೆಯು ಅಜಿತ್ ಪವಾರ್ ಅವರ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. 21 ಸದಸ್ಯರ ಮಂಡಳಿಯಲ್ಲಿ ಒಂಬತ್ತು ಬಿಜೆಪಿ ನಿರ್ದೇಶಕರು, ಎಂಟು ಮಂದಿ ಅಜಿತ್ ಪವಾರ್ ಅವರ ಎನ್‌ಸಿಪಿ ಮತ್ತು ನಾಲ್ವರು ಶಿವಸೇನೆಯಿಂದ ಗೆದ್ದಿದ್ದಾರೆ.

ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಶಿವಸೇನೆ ಎನ್​ಸಿಪಿಗೆ ಬೆಂಬಲ ನೀಡಿದೆ. ಚುನಾವಣೆಯಲ್ಲಿ ಎನ್‌ಸಿಪಿಯ ಉದಯಸಿನ್ಹ್ ಪಾಟೀಲ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಶಿವಸೇನೆಯ ದೀಪಕ್ ಚವಾಣ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಮೈತ್ರಿಕೂಟಕ್ಕೆ ಎನ್‌ಸಿಪಿ ಸಚಿವ ಮಕರಂದ್ ಪಾಟೀಲ್ ಮತ್ತು ಶಿವಸೇನಾ ಸಚಿವ ಶಂಭುರಾಜ್ ದೇಸಾಯಿ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ಮತ್ತು ಶಿವಸೇನೆ ಬ್ಯಾಂಕ್ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದವು ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಸ್ಪರ್ಧೆಯ ಸಮಯದಲ್ಲಿ ಬೇರ್ಪಟ್ಟಿದ್ದರಿಂದ ಈ ಬೆಳವಣಿಗೆ ವಿಶೇಷವಾಗಿ ಮಹತ್ವದ್ದಾಗಿದೆ.

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿದ್ದರೂ ಶಿವಸೇನೆಯನ್ನು ಬಿಜೆಪಿ ಈ ಹಿಂದೆ ಬದಿಗಿಟ್ಟಿತ್ತು.ಇನ್ನೂ ರಾಜ್ಯ ಸರ್ಕಾರದಲ್ಲಿ ಪಾಲುದಾರರಾಗಿದ್ದರೂ ರಾಜಕೀಯ ಜಾಗಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹೆಚ್ಚುತ್ತಿರುವ ಸ್ಪರ್ಧೆಯನ್ನು ಇತ್ತೀಚಿನ ಬೆಳವಣಿಗೆಗಳು ಪ್ರತಿಬಿಂಬಿಸುತ್ತವೆ ಎನ್ನಬಹುದು (ಏಜೆನ್ಸೀಸ್).