ಸಾಮಾಜಿಕ ಜಾಲತಾಣದಲ್ಲಿ ನಿರೂಪಕಿ ರುಬಿಕಾ ಲಿಯಾಕತ್ ಮತ್ತು ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸನ್ ನಡುವೆ ವಾಗ್ವಾದ  
ದೇಶ

Rubika v/s Helle: ಹಳೆಯ ವೈರಲ್ ವಿಡಿಯೋ ವಿವಾದ: ನಾರ್ವೆ ಪತ್ರಕರ್ತೆಗೆ ಟಿವಿ ನಿರೂಪಕಿ ರುಬಿಕಾ ತಿರುಗೇಟು

  • ವಾಯುಮಾಲಿನ್ಯ ಕುರಿತ ರುಬಿಕಾ ಲಿಯಾಕತ್ ಹಳೆ ವಿಡಿಯೋ ವೈರಲ್

  • ವಿಡಿಯೋವನ್ನು ಪ್ರಶ್ನಿಸಿದ್ದ ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸನ್

  • ಪೂರ್ಣ ಹಿನ್ನೆಲೆ ತಿಳಿದುಕೊಳ್ಳುವಂತೆ ತಿರುಗೇಟು ನೀಡಿದ್ದಾರೆ ಎಂದ ರುಬಿಕಾ

  • ಮತ್ತೊಂದೆಡೆ ಹೆಲ್ಲೆ ಪರವಾಗಿ ಬ್ಯಾಟ್ ಬೀಸಿದ ನೆಟ್ಟಿಗರು

Social Media Controversy: ಟಿವಿ ನಿರೂಪಕಿ ರುಬಿಕಾ ಲಿಯಾಕತ್ ಮತ್ತು ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸನ್ ನಡುವಿನ ಸಾಮಾಜಿಕ ಜಾಲತಾಣದ ವಾಗ್ವಾದ ಚರ್ಚೆಗೆ ಗ್ರಾಸವಾಗಿದೆ. ವಾಯುಮಾಲಿನ್ಯದ ಬಗ್ಗೆ ರುಬಿಕಾ ಮಾತನಾಡಿರುವ ಹಳೆಯ ವಿಡಿಯೋ ವೈರಲ್ ಆಗಿದ್ದು, ಅದನ್ನು ಪ್ರಶ್ನಿಸಿದ ಹೆಲ್ಲೆ ಅವರಿಗೆ ರುಬಿಕಾ ತಿರುಗೇಟು ನೀಡಿದ್ದಾರೆ.

ದೀಪಾವಳಿ ನಂತರದ ಹೊಗೆ ಮತ್ತು ದೇಶದ ಹಲವು ಭಾಗಗಳಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರುಬಿಕಾ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದ ಹೆಲ್ಲೆ ಲಿಂಗ್, 'ಇದು ನಿಜವಾಗಿಯೂ ನಡೆಯುತ್ತಿದೆಯೇ?' ಎಂದು ಪ್ರಶ್ನಿಸಿದ್ದರು.

ಹೆಲ್ಲೆಗೆ, ರುಬಿಕಾ ತಿರುಗೇಟು

ಇದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ರುಬಿಕಾ, ವಿಡಿಯೋದಲ್ಲಿ ತಾವು ಏನು ಹೇಳುತ್ತಿದ್ದಾರೆ, ಯಾವ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ ಮತ್ತು ಸುದ್ದಿ ಯಾವಾಗ ಪ್ರಸಾರವಾಗಿತ್ತು ಎಂಬುದನ್ನು ಮೊದಲು ತಿಳಿದುಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಕೇವಲ ವಿಡಿಯೋದ ತುಣುಕನ್ನು ನೋಡಿ ಪ್ರತಿಕ್ರಿಯಿಸಬಾರದು ಎಂಬರ್ಥದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ ರುಬಿಕಾ ನಗರಗಳ ವಾಯುಮಾಲಿನ್ಯದ ಬಗ್ಗೆ ಮಾತನಾಡಿದ್ದಾರೆ. ಮಾಲಿನ್ಯದ ಪದರವು ಸೂರ್ಯನ ತೀವ್ರ ಕಿರಣಗಳಿಂದ ಚರ್ಮವನ್ನು ರಕ್ಷಿಸಬಹುದು ಎಂಬರ್ಥದ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಯುರೋಪ್ ದೇಶಗಳಲ್ಲಿ ಸ್ವಚ್ಛ ಗಾಳಿ ಮತ್ತು ಸ್ಪಷ್ಟ ಆಕಾಶ ಇರುವುದರಿಂದ ಸೂರ್ಯನ ಬೆಳಕು ಹೆಚ್ಚು ನೇರವಾಗಿ ಬೀಳುತ್ತದೆ ಎಂದೂ ಹೇಳಿದ್ದಾರೆ.

ಈ ವಿಡಿಯೋ ವಾಯುಮಾಲಿನ್ಯ, ಬೆಳೆ ತ್ಯಾಜ್ಯ ಸುಡುವಿಕೆ ಮತ್ತು ಹಬ್ಬದ ಸಂದರ್ಭದಲ್ಲಿ ಪಟಾಕಿ ಬಳಕೆಯ ನಿರ್ಬಂಧಗಳ ಕುರಿತ ಚರ್ಚೆಯ ನಡುವೆ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: Labor Illusion: ಕೆಲಸದ ಹಿಂದಿನ ಶ್ರಮ ಕಾಣಿಸಿದರೆ ಸೇವೆಯ ಮೌಲ್ಯ ಹೆಚ್ಚಾಗುತ್ತಾ? ಇದೇ 'ಲೇಬರ್ ಇಲ್ಯೂಷನ್' ಸೈಕಾಲಜಿ!

ಮತ್ತೊಂದೆಡೆ, ಎಕ್ಸ್‌ನಲ್ಲಿ ರುಬಿಕಾ ಅವರ ಪ್ರತಿಕ್ರಿಯೆಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿ ಹೆಲ್ಲೆ ಪರವಾಗಿ ಬ್ಯಾಟ್ ಬೀಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದಲ್ಲಿ ನಾರ್ವೆ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಪತ್ರಿಕೋದ್ಯಮ ಅಧಿಕಾರವನ್ನು ಪ್ರಶ್ನಿಸುವುದೇ ಹೊರತು, ಅಧಿಕಾರದ ಮುಂದೆ ಬಾಗಿ ಚಾಕರಿ ಮಾಡುವುದಲ್ಲ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ.