ಕೇರಳ ಸಿಎಂ ವಿ.ಡಿ.ಸತೀಶನ್ ಮತ್ತು ರಾಜ್ಯಪಾಲ ರಾಜೇಂದ್ರ ಅರ್ಲೇಕರ್
ತಿರುವನಂತಪುರಂ: ಕೇರಳದಲ್ಲಿ ವಂದೇ ಮಾತರಂ(Vande Mataram) ಗೀತೆ ಬಗ್ಗೆ ಮತ್ತೊಮ್ಮೆ ಭುಗಿಲೆದ್ದಿದ್ದು, ಯುಡಿಎಫ್ ಸರ್ಕಾರದ ಮೊದಲ ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಗೀತೆಯ ಪೂರ್ಣ ಚರಣಗಳನ್ನು ಹಾಡದ್ದಕ್ಕೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೊದಲು ಮತ್ತು ನಂತರ ಬ್ಯಾಂಡ್ ತಂಡವು 'ವಂದೇ ಮಾತರಂ' ಹಾಡಿನ ಮೊದಲ ಚರಣಗಳನ್ನು ಮಾತ್ರ ನುಡಿಸಿತು. ಇದು ಈ ಹಿಂದೆ ಎಲ್ಡಿಎಫ್ ಸರ್ಕಾರ ನಡೆಸಿಕೊಂಡ ಬಂದ ಸಂಪ್ರದಾಯವನ್ನೇ ಯುಡಿಎಫ್ ಸರ್ಕಾರವೂ ಮುಂದುವರೆಸಿದ್ದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯಪಾಲರ ಅಸಮಾಧಾನ
ವಿಧಾನಸಭೆಯಿಂದ ಭಾಷಣ ಮುಗಿಸಿ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಪಾಲ ಅರ್ಲೇಕರ್, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವುದು ಶಿಷ್ಟಚಾರ. ರಾಜ್ಯಪಾಲರು ಹಾಜರಿದ್ದಾಗಲೆಲ್ಲಾ ವಂದೇ ಮಾತರಂನ ಸಂಪೂರ್ಣ ಹಾಡನ್ನು ಹಾಡಬೇಕು ಎಂದರು.
ಆದರೆ ಈ ವೇಳೆ ಆ ಹಾಡನ್ನು ಹಾಡಲಾಗಿಲ್ಲ, ಅದನ್ನು ಕೇವಲ ನುಡಿಸಲಾಯಿತು. ಈ ಬಗ್ಗೆ ಈಗಾಗಲೇ ವಿಧಾನಸಭಾ ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್ ಅವರ ಮಾತನಾಡಿದ್ದೇನೆ. ಮುಂದೆ ಸರಿಪಡಿಸಿಕೊಳ್ಳುತ್ತಾರೆ ಅಂದುಕೊಂಡಿದ್ದೇವೆ ಮತ್ತು ಏನಾಗುತ್ತದೆ ಎಂದು ಕಾದು ನೋಡೋಣ ಎಂದು ಹೇಳಿದ್ದಾರೆ.
ಬಿಜೆಪಿ ಕಿಡಿ
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವೇಳೆ ವಂದೇ ಮಾತರಂನ ಪೂರ್ಣ ಪ್ರಮಾಣದ ಗೀತೆಯನ್ನು ಹಾಡದಿದ್ದಕ್ಕೆ ಯುಡಿಎಫ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ಇದು ರಾಜ್ಯಪಾಲರಿಗೆ ಮಾಡಿದ ಅವಮಾನ. ವಿ.ಡಿ. ಸತೀಶ್ ನೇತೃತ್ವದ ಯುಡಿಎಫ್ ಸರ್ಕಾರವು ಜಮಾತೆ-ಇ-ಇಸ್ಲಾಮಿ ಮತ್ತು ಸಿಪಿಎಂನ ಅಭಿಪ್ರಾಯಗಳಿಗೆ ತಲೆಬಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ವಿ.ಮುರುಳೀಧರನ್, ರಾಜ್ಯಪಾಲರು ಇರುವಾಗಲೆಲ್ಲಾ ರಾಷ್ಟ್ರಗೀತೆ ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡುವಂತೆ ಕೇಂದ್ರ ಸರ್ಕಾರದ ಆದೇಶ ನೀಡಿದೆ. ಆದರೆ ಕೇರಳ ಸರ್ಕಾರ ಈ ಆದೇಶವನ್ನು ಪಾಲಿಸಿಲ್ಲ. ವಂದೇ ಮಾತರಂ ಹಾಡು 150 ವರ್ಷಗಳನ್ನು ಪೂರೈಸುತ್ತಿರುವಾಗ ಹೀಗೆ ಮಾಡುವುದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).