ಕೋಲ್ಕತ್ತಾ: ಬಾಂಗ್ಲಾ ದೇಶ ಮೂಲದ ವಿವಾದಿತ ಲೇಖಕಿ ತಸ್ಲಿಮಾ ನಸ್ರಿನ್(Taslima Nasrin) ಅವರು ಸುಮಾರು 19 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂದು(ಜು. 31) ಕೋಲ್ಕತ್ತಾ ನಗರಕ್ಕೆ ಬಂದಿಳಿದಿದ್ದಾರೆ. 2007ರಲ್ಲಿ ಎಡಪಕ್ಷಗಳ ಸರ್ಕಾರ ಅವರನ್ನು ಮುಸ್ಲಿಂ ಗುಂಪುಗಳ ಪ್ರತಿಭಟನೆಗೆ ಎದುರಿ ನಗರ ಬಿಡುವಂತೆ ಹೇಳಿತ್ತು.
ಆಗಸ್ಟ್ 1ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. 2007ರಲ್ಲಿ ಅವರ ಆತ್ಮಚರಿತ್ರೆಯ ಬಂಗಾಳಿ ಆವೃತ್ತಿಯಾದ ದ್ವಿಖಂಡಿಟೊವನ್ನು ನಿಷೇಧಿಸುವಂತೆ ಒತ್ತಾಯಿಸಿ ಇಸ್ಲಾಮಿಕ್ ಗುಂಪುಗಳು ಪ್ರತಿಭಟನೆ ನಡೆಸಿದ್ದರಿಂದ ಅವರು ಅಂದು ಕೋಲ್ಕತ್ತಾ ಬಿಟ್ಟು ತೆರಳಿದ್ದರು.
ಕೋಲ್ಕತ್ತಾ ಏರ್ಪೋರ್ಟ್ಗೆ ಆಗಮಿಸಿದ ಅವರನ್ನು ಅಪಾರ ಬೆಂಬಲಿಗರು ಸ್ವಾಗತಿಸಿದ್ದು, ಈ ವೇಳೆ ಮಾತನಾಡಿರುವ ಅವರು, ಕೋಲ್ಕತ್ತಾಗೆ ಹಿಂತಿರುಗಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಮತ್ತು ನನಗೆ ಭದ್ರತೆ ನೀಡಿದ್ದಕ್ಕಾಗಿ ಪ್ರಸ್ತುತ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ನನ್ನೊಂದಿಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ. ನಾನು ಈ ನಗರಕ್ಕೆ ಹೆಚ್ಚಾಗಿ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪುಸ್ತಕ ಮೇಳದಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ನಸ್ರಿನ್ ಕೋಲ್ಕತ್ತಾಗೆ ಮರುಳುವ ಇಚ್ಚೆಯನ್ನು ವ್ಯಕ್ತಪಡಿಸಿದಾಗ ಅವರ ಬೆಂಬಲಕಕೆ ನಿಂತಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ, 2025ರಲ್ಲಿ ರಾಜ್ಯಸಭೆಯಲ್ಲಿ ಅವರ ಬಗ್ಗೆ ಧ್ವನಿ ಎತ್ತಿದ್ದರು. ಮತ್ತು ಅವರ ಬಂಗಾಳಕ್ಕೆ ಬರಲು ಅವಕಾಶ ಮಾಡುವಂತೆ ಒತ್ತಾಯಿಸಿದ್ದರು (ಏಜೆನ್ಸೀಸ್).