Supreme Court Of India  
ದೇಶ

ಬೀದಿ ನಾಯಿಗಳ ನಿಯಂತ್ರಣ; ರಾಜ್ಯಗಳು ಗಾಳಿಯಲ್ಲಿ ಗೋಪುರ ಕಟ್ಟುತ್ತಿವೆ: ಸುಪ್ರೀಂ ಗರಂ! | Stray Dog Issue

ನವದೆಹಲಿ: ದೇಶಾದ್ಯಂತ ಬೀದಿ ನಾಯಿಗಳ ಹಾವಳಿ(Stray Dog Issue) ಮತ್ತು ಅವುಗಳ ಸಂತಾನಹರಣ ಚಿಕಿತ್ಸೆಗೆ (Sterilisation) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗಿದೆ.
ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಮತ್ತು ಕೇವಲ ನೆಪಗಳನ್ನು ಹೇಳುತ್ತಿರುವ ರಾಜ್ಯಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, "ಇವೆಲ್ಲವೂ ಗಾಳಿಯಲ್ಲಿ ಗೋಪುರ ಕಟ್ಟುವ ಕೆಲಸ" ಎಂದು ಕಟುವಾಗಿ ಟೀಕಿಸಿದೆ.
ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವೇನು?
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸಾ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಈ ಹಿಂದೆ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ರಾಜ್ಯಗಳು ಪಾಲಿಸಿಲ್ಲ ಎಂಬುದು ನ್ಯಾಯಪೀಠದ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ರಾಜ್ಯಗಳು ಸಲ್ಲಿಸಿದ ಅನುಪಾಲನಾ ವರದಿಗಳನ್ನು ಗಮನಿಸಿದ ನ್ಯಾಯಾಧೀಶರು, ಅಧಿಕಾರಿಗಳು ಕೇವಲ "ಕಥೆ ಹೇಳುವ ಕೆಲಸದಲ್ಲಿ" (Storytelling) ತೊಡಗಿದ್ದಾರೆ ಎಂದು ಕಿಡಿಕಾರಿದರು. ವಾಸ್ತವದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಮತ್ತು ಕೇವಲ ಕಾಗದದ ಮೇಲೆ ಯೋಜನೆಗಳನ್ನು ತೋರಿಸಲಾಗುತ್ತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಅಮಿಕಸ್ ಕ್ಯೂರಿ ಅವರಿಂದ ಲೋಪದೋಷಗಳ ಪಟ್ಟಿ

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ನೇಮಕಗೊಂಡಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ (Amicus Curiae), ವಿವಿಧ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಲೇ, ಅಲ್ಲಿರುವ ಗಂಭೀರ ಲೋಪದೋಷಗಳನ್ನು ಎತ್ತಿ ತೋರಿಸಿದರು. ಅನೇಕ ರಾಜ್ಯಗಳಲ್ಲಿ ನಾಯಿಗಳ ಸಂತಾನಹರಣಕ್ಕಾಗಿ ಅಗತ್ಯವಿರುವ ಮೂಲಸೌಕರ್ಯ, ಪಶುವೈದ್ಯರ ಕೊರತೆ ಮತ್ತು ಅನುದಾನದ ದುರ್ಬಳಕೆಯಾಗುತ್ತಿರುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಬೀದಿ ನಾಯಿಗಳ ಕಡಿತದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ, ಆದರೆ ಸರ್ಕಾರಗಳು ತಾಂತ್ರಿಕ ಕಾರಣಗಳನ್ನು ನೀಡಿ ಜಾರಿಕೊಳ್ಳುತ್ತಿವೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಇಂದಿನ ವಿಚಾರಣೆಯ ನಂತರ, ರಾಜ್ಯಗಳು ತಮ್ಮ ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ಸಲ್ಲಿಸಲು ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ,(ಏಜೆನ್ಸೀಸ್​).