ಪ್ರಶಾಂತ್ ಕಿಶೋರ್ ಮತ್ತು ನಿತಿನ್ ನವೀನ್ 
ದೇಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ತೆರೆವಾದ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ: ಪ್ರಶಾಂತ್ ಕಿಶೋರ್ ಘೋಷಣೆ | Prashant Kishor

ಪಾಟ್ನಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಂದ ತೆರವಾದ ಬಂಕಿಪುರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಘೋಷಿಸಿದ್ದಾರೆ. ಬಂಕಿಪುರದಲ್ಲಿ ಬಿಜೆಪಿಯನ್ನು ಸೋಲಿಸಲು ಜನ್ ಸುರಾಜ್ ಸಮರ್ಥವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಜನ್ ಸೂರಜ್ ಪಕ್ಷವು ಒಂದೇ ಒಂದು ಸ್ಥಾನದಲ್ಲಿ ಗೆಲ್ಲಲಿಲ್ಲ. ಆಡಳಿತಾರೂಢ ಎನ್‌ಡಿಎ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಹಿಳೆಯರಿಗೆ ತಲಾ 10 ಸಾವಿರ ನೀಡಿದ್ದೇ ತಮ್ಮ ಸೋಲಿಗೆ ಕಾರಣ ಎಂದು ಹೇಳಿದ್ದರು.
ಬಂಕೀಪುರ ಉಪಚುನಾವಣೆ ಕುರಿತು ಮಾತನಾಡಿರುವ ಪ್ರಶಾಂತ್ ಕಿಶೋರ್, ಬಂಕಿಪುರ ಉಪಚುನಾವಣೆಯಲ್ಲಿ ಜನಸೂರಾಜ್ ಸ್ಪರ್ಧಿಸಲಿದೆ. ನಾನು ಸ್ಪರ್ಧಿಸುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಪಕ್ಷದ ಸಂಘಟನಾ ಕಾರ್ಯದ ಮೇಲೆ ಗಮನಹರಿಸಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಈ ಉಪಚುನಾವಣೆ ವೇಳೆ ಪಕ್ಷದ ಸಾಮೂಹಿಕ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
ಇನ್ನೂ ನಿತಿನ್ ನಬಿನ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅವರು ಪ್ರತಿನಿಧಿಸಿದ್ದ ಬಂಕಿಪುರ ಕ್ಷೇತ್ರವು ಈಗ ವಿವಿಐಪಿ ಸ್ಥಾನವಾಗಿದೆ. ಬಿಜೆಪಿ ಅಲ್ಲಿ ಗೆಲ್ಲಲು ಶತಪ್ರಯತ್ನವನ್ನು ಪಡುತ್ತದೆ. ಅಲ್ಲಿಯೇ ಪ್ರಬಲ ಪೈಪೋಟಿ ಕೊಟ್ಟರೆ ಪಕ್ಷಕ್ಕೆ ಬಲ ಬರಲಿದೆ. ಈ ಹಿನ್ನೆಲೆ ಪ್ರಶಾಂತ್ ಕಿಶೋರ್ ಅವರಿಗೆ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕಾರಿಣಿ ಒತ್ತಾಯಿಸಿದೆ ಎನ್ನಲಾಗಿದೆ.
ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬಂಕಿಪುರ ಕ್ಷೇತ್ರದಿಂದ ನಿತಿನ್ ನಬಿನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸತತ ಐದನೇ ಬಾರಿಗೆ ಗೆದ್ದಿದ್ದರು. ಕಳೆದ ಜನವರಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವರು ಆಯ್ಕೆಯಾದರು. ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದರಿಂದ ಬಂಕೀಪುರದಲ್ಲಿ ಉಪಚುನಾವಣೆ ನಡೆಯಲಿದೆ (ಏಜೆನ್ಸೀಸ್)