ನವದೆಹಲಿ: ಪರ್ವತಗಳ ಚಳಿ, ಸುಂದರ ನೋಟ ಮತ್ತು ಬಿಸಿಬಿಸಿ ಮ್ಯಾಗಿ ಇದು ಪ್ರತಿಯೊಬ್ಬ ಪ್ರವಾಸಿಯ ಫೇವರೇಟ್ ಕಾಂಬಿನೇಷನ್ ಆಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಪರ್ವತ ಪ್ರದೇಶವೊಂದರಲ್ಲಿ ಮ್ಯಾಗಿ (Maggi noodles) ಮಾರಾಟ ಮಾಡಿ ಕೇವಲ ಒಂದೇ ದಿನಕ್ಕೆ 21,000 ರೂ. ಗಳಿಸಿರುವ ವಿಡಿಯೋ ಹಂಚಿಕೊಂಡಿದ್ದು, ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.
ಘಟನೆ ಏನು?
ಬಾದಲ್ ಠಾಕೂರ್ ಎಂದು ಗುರಿತಿಸುವ ವ್ಯಕ್ತಿಯೊಬ್ಬ ಪರ್ವತ ಪ್ರದೇಶಗಳಲ್ಲಿ ಸಿಲಿಂಡರ್ ಮತ್ತು ಟೇಬಲ್‌ನೊಂದಿಗೆ ಮ್ಯಾಗಿ ಸ್ಟಾಲ್ ಹಾಕಿಕೊಂಡಿದ್ದರು. ಅಲ್ಲಿ ಅವರು ಒಂದು ಪ್ಲೇಟ್ ಮ್ಯಾಗಿಗೆ 70 ರೂ.ಗಳು ಹಾಗೂ ಚೀಸ್ ಮ್ಯಾಗಿ ಪ್ಲೇಟ್ ಅನ್ನು 100 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ಅವರು ದಿನವಿಡೀ ಅಂದಾಜು 300 ರಿಂದ 350 ಮ್ಯಾಗಿಯನ್ನು ಮಾರಾಟ ಮಾಡಿ 21 ಸಾವಿರ ರೂ.ಗಳನ್ನು ಗಳಿಸಿರುವುದಾಗಿ ಹಂಚಿಕೊಂಡಿದ್ದಾರೆ.
ಒಂದು ದಿನ ಪರ್ವತಗಳಲ್ಲಿ ಮ್ಯಾಗಿ ಮಾರಾಟ ಎಂಬ ಶೀರ್ಷಿಕೆಯೊಂದಿಗೆ ಬಾದಲ್ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ 4 ಮಿಲಿಯನ್ಗೂ ಹೆಚ್ಚಾಗಿ ವೀಕ್ಷಣೆಯನ್ನು ಪಡೆದುಕೊಂಡಿತು. ಇದು ಗಿರಿಧಾಮಗಳಲ್ಲಿ ಆರಾಮದಾಯಕ ಆಹಾರವಾಗಿ ಮ್ಯಾಗಿಯ ಅಪಾರ ಜನಪ್ರಿಯತೆಯನ್ನು ಎತ್ತಿ ತೋರಿಸಿದೆ.
ಇಂಟರ್ನೆಟ್ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಕೆಲವರು "ಇದೊಂದು ಸ್ಫೂರ್ತಿದಾಯಕ ಐಡಿಯಾ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ" ಎಂದು ಹೊಗಳಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರತಿ ತಿಂಗಳು 6 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಮ್ಯಾಗಿ ಮಾರಿ ಗಳಿಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ನಾನು ನನ್ನ ಕೆಲಸವನ್ನು ಬಿಡಬೇಕೇ? ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.
ಬಾದಲ್ ಠಾಕೂರ್ ಅವರ ಈ ಪ್ರಯೋಗವು ಇಂದಿನ ಯುವಜನತೆಗೆ ಒಂದು ಸಂದೇಶವನ್ನು ನೀಡುತ್ತದೆ. ಕೇವಲ ಡಿಜಿಟಲ್ ಲೋಕದಲ್ಲಿ ಮಾತ್ರವಲ್ಲದೆ, ವಾಸ್ತವ ಪ್ರಪಂಚದಲ್ಲೂ ಸಣ್ಣ ಸಣ್ಣ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಕಾಣಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪ್ರವಾಸೋದ್ಯಮದಲ್ಲಿ 'ಆಹಾರ ಮತ್ತು ಪಾನೀಯ' ವಿಭಾಗಕ್ಕೆ ಎಷ್ಟು ದೊಡ್ಡ ಮಾರುಕಟ್ಟೆ ಇದೆ ಎಂಬುದಕ್ಕೆ ಈ ವೈರಲ್ ವೀಡಿಯೊವೇ ಸಾಕ್ಷಿಯಾಗಿದೆ (ಏಜೆನ್ಸೀಸ್).