ನವದೆಹಲಿ: ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೋಟಿಸ್ಗೆ ಉತ್ತರ ನೀಡದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್ ಹಾಗೂ ಇತರ ಆಪ್ ನಾಯಕರನ್ನು ಮಂಗಳವಾರ(ನ. 17) ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ನವೀನ್ ಚಾವ್ಲಾ ಮತ್ತು ಅರುಣ್ ಭಾರದ್ವಾಜ್ ಅವರ ವಿಭಾಗೀಯ ಪೀಠವು, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಲ್ಲಿಯವರೆಗೆ ಉತ್ತರಗಳನ್ನು ಸಲ್ಲಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು. ಅಂತಿಮವಾಗಿ ಮೂರು ವಾರ ಗಡುವನ್ನು ವಿಸ್ತರಿಸಿ, ಇನ್ನು ಮುಂದೆ ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಹಾಗೂ ಈ ಸಮಯದೊಳಗೆ ಉತ್ತರಗಳನ್ನು ಸಲ್ಲಿಸದಿದ್ದರೆ, ಅವರು ತಮ್ಮ ವಿಚಾರಣೆಯ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ಎಲ್ಲಾ ಅಗತ್ಯ ದಾಖಲೆಗಳನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ದೃಢೀಕರಿಸುವ ವರದಿಯನ್ನು ಗಮನಿಸಿದ ಪೀಠವು, ಕ್ಷಮಿಸಿ ಎಲ್ಲವೂ ಪೂರ್ಣಗೊಂಡಿದೆ ಎಂಬ ವರದಿ ನಮಗೆ ಬಂದಿದೆ. ಇನ್ನು ಮುಂದೆ ನಾವು ನಿಮಗೆ ಹೆಚ್ಚಿನ ಸಮಯ ನೀಡುವುದಿಲ್ಲ. ಇದು ಸರಿಯಲ್ಲ. ನೀವು ನಮ್ಮನ್ನು ದಾರಿ ತಪ್ಪಿಸುತ್ತಿದ್ದೀರಿ. ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ರಿಜಿಸ್ಟ್ರಿಯಿಂದ ವರದಿ ಬಂದಿದೆ... ಈಗ ನೀವು ನಿಮ್ಮ ಉತ್ತರಗಳನ್ನು ಸಲ್ಲಿಸಿ, ಇಲ್ಲದಿದ್ದರೆ, ನಿಮ್ಮ ಹಕ್ಕನ್ನು ನಾವು ರದ್ದುಗೊಳಿಸುತ್ತೇವೆ ಎಂದು ಹೇಳಿದೆ.
ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಸಿಎಂ ಸೇರಿ ಹಲವು ನಾಯಕರು ಬಂಧನಕ್ಕೊಳಗಾಗಿದ್ದ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿ, ಪ್ರಕರಣವನ್ನು ರದ್ದುಗೊಳಿಸಿತ್ತು. ಜೊತೆಗೆ ತನಿಖೆಯ ಬಗ್ಗೆ ಎಜೆನ್ಸಿಗಳ ವಿರುದ್ಧ ಟೀಕೆ ಮಾಡಿತ್ತು.
ಆದರೆ ಕೇಂದ್ರ ತನಿಖಾ ದಳ(ಸಿಬಿಐ) ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತು. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ನೇತೃತ್ವದ ಏಕಸದಸ್ಯ ಪೀಠ ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆಗೆ ಅಂಗೀಕರಿಸಿದ ಬಳಿಕ ವಿವಾದ ಹುಟ್ಟಿಕೊಂಡಿತು.
ನ್ಯಾಯಾಧೀಶರ ಕಡೆಯಿಂದ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷವಿದೆ ಎಂದು ಆರೋಪಿಸಿ, ಅರವಿಂದ್ ಕೇಜ್ರಿವಾಲ್ ಅವರು ನ್ಯಾ. ಸ್ವರ್ಣಕಾಂತ ಶರ್ಮಾ ಅವರಿಗೆ ವಿಚಾರಣೆಯಿಂದ ಹಿಂದೆ ಸರಿಯಲು ಮನವಿ ಮಾಡಿದರು. ಆದರೆ ನ್ಯಾಯಾಧೀಶರು ಹಿಂದೆ ಸರಿಯಲು ಒಪ್ಪಲಿಲ್ಲ. ಆಪ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಬಳಿಕ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕವಾಗಿ ಒಂದು ಪತ್ರ ಬರೆದು, ಇನ್ಮುಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಈ ಬೆಳವಣಿಗೆಗಳ ಬಳಿಕ ನ್ಯಾ. ಶರ್ಮಾ ಅವರು ಆಪ್ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಬಳಿಕ ವಿಚಾರಣೆಯಿಂದ ಹಿಂದೆ ಸರಿದರು. ಪ್ರಸ್ತುತ ಈ ವಿಷಯವನ್ನು ನ್ಯಾಯಮೂರ್ತಿ ಚಾವ್ಲಾ ನೇತೃತ್ವದ ಪೀಠವು ವಿಚಾರಣೆ ನಡೆಸುತ್ತಿದೆ (ಏಜೆನ್ಸೀಸ್).