ಪರೀಕ್ಷೆಗೆ ಹೋಗುತ್ತಿದ್ದ ಯುವತಿಯನ್ನು ಅರ್ಧದಲ್ಲೇ ಬಿಟ್ಟು ಹೋದ ಆಟೋ ಚಾಲಕ: ಓಲಾ ಕಂಪನಿಗೆ ಬಿತ್ತು 55 ಸಾವಿರ ರೂ. ದಂಡ! Consumer Court  
ದೇಶ

ಪರೀಕ್ಷೆಗೆ ಹೋಗುತ್ತಿದ್ದ ಯುವತಿಯನ್ನು ಅರ್ಧದಲ್ಲೇ ಬಿಟ್ಟು ಹೋದ ಆಟೋ ಚಾಲಕ: ಓಲಾ ಕಂಪನಿಗೆ ಬಿತ್ತು 55 ಸಾವಿರ ರೂ. ದಂಡ! Consumer Court

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಂದಿ ಆನ್‌ಲೈನ್ ಮೂಲಕ ಬೈಕ್, ಆಟೋ ಮತ್ತು ಟ್ಯಾಕ್ಸಿ ಸೇವೆ ಪಡೆಯುತ್ತಿದ್ದಾರೆ
  • ಕೆಲವರು ಒಳ್ಳೆಯ ಪ್ರಯಾಣದ ಅನುಭವ ಪಡೆದರೆ, ಇನ್ನು ಕೆಲವರಿಗೆ ಕಹಿ ಅನುಭವವಾಗುತ್ತದೆ
  • ಇತ್ತೀಚೆಗೆ ಆನ್‌ಲೈನ್ ಮೂಲಕ ಬುಕ್ ಮಾಡಿದ್ದ ಆಟೋ ಹತ್ತಿದ ಯುವತಿಯೊಬ್ಬಳಿಗೆ ಕೆಟ್ಟ ಅನುಭವ
  • ಆಟೋ ಚಾಲಕನ ವಿರುದ್ಧ ಯುವತಿ ನಡೆಸಿದ ಕಾನೂನು ಹೋರಾಟ ನಿಜಕ್ಕೂ ಎಲ್ಲರಿಗೂ ಮಾದರಿ
Consumer Court : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಆನ್‌ಲೈನ್ ಆ್ಯಪ್‌ಗಳ ಮೂಲಕ ಬೈಕ್, ಆಟೋ ಮತ್ತು ಟ್ಯಾಕ್ಸಿ ಸೇವೆಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೆಲವರು ಒಳ್ಳೆಯ ಪ್ರಯಾಣದ ಅನುಭವ ಪಡೆದರೆ, ಇನ್ನು ಕೆಲವರಿಗೆ ಕಹಿ ಅನುಭವವಾಗುತ್ತದೆ. ಅದೇ ರೀತಿ, ಇತ್ತೀಚೆಗೆ ಆನ್‌ಲೈನ್ ಮೂಲಕ ಬುಕ್ ಮಾಡಿದ್ದ ಆಟೋ ಹತ್ತಿದ ಯುವತಿಯೊಬ್ಬಳಿಗೆ ಕೆಟ್ಟ ಅನುಭವವಾಗಿದ್ದು, ಅದಕ್ಕೆ ಪ್ರತಿಯಾಗಿ ಆಕೆ ನಡೆಸಿದ ಕಾನೂನು ಹೋರಾಟ ನಿಜಕ್ಕೂ ಮಾದರಿಯಾಗಿದೆ.
.
ಈ ಘಟನೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಯುವತಿಯೊಬ್ಬಳು 'ಜೂನಿಯರ್ ಸಿವಿಲ್ ಜಡ್ಜ್ ಮೇನ್ಸ್' (Junior Civil Judge Mains) ಪರೀಕ್ಷೆ ಬರೆಯಲು ಹೊರಟಿದ್ದ ಸಂದರ್ಭದಲ್ಲಿ ಓಲಾ ಆಟೋ ಚಾಲಕನಿಂದ ಕೆಟ್ಟ ಅನುಭವವನ್ನು ಆಕೆ ಎದುರಿಸಿದ್ದಾಳೆ.
ಯುವತಿ ಹಾಗೂ ಆಕೆಯ ತಾಯಿ ಗುಂಟೂರಿನಿಂದ ಪರೀಕ್ಷಾ ಕೇಂದ್ರವಾದ ನಾಗಾರ್ಜುನ ವಿಶ್ವವಿದ್ಯಾಲಯಕ್ಕೆ ಹೋಗಲು 'ಓಲಾ' (Ola) ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದರು. ಆದರೆ, ಆ್ಯಪ್‌ನಲ್ಲಿ ತೋರಿಸಿದ ವಾಹನದ ಬದಲಾಗಿ ಚಾಲಕ ಬೇರೊಂದು ವಾಹನದಲ್ಲಿ ಬಂದಿದ್ದಲ್ಲದೆ, ಪ್ರಯಾಣ ಆರಂಭಿಸುವ ಮುನ್ನವೇ ಓಟಿಪಿ ನೀಡುವಂತೆ ಕೇಳಿದನು. ತದನಂತರ, ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವ ಬದಲಾಗಿ ಚಾಲಕ ಅವರಿಬ್ಬರನ್ನು ಬೇರೊಂದು ಮಾರ್ಗದ ಮೂಲಕ ಕರೆದುಕೊಂಡು ಹೋಗಿದ್ದಾನೆ.
ವಿದ್ಯಾರ್ಥಿನಿ ತಲುಪಬೇಕಾದ ಪರೀಕ್ಷಾ ಕೇಂದ್ರಕ್ಕಿಂತ ಇನ್ನೂ 25 ಕಿಲೋಮೀಟರ್ ದೂರವಿರುವಾಗಲೇ, ಅಲ್ಲಿಗೆ ಕರೆದೊಯ್ಯಲು ಚಾಲಕ ಹೆಚ್ಚುವರಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಆದರೆ, ಹಣ ನೀಡಲು ನಿರಾಕರಿಸಿದಾಗ ಆ ಚಾಲಕ, ಯುವತಿ ಮತ್ತು ಆಕೆಯ ತಾಯಿಯನ್ನು ಅರ್ಧ ಹಾದಿಯಲ್ಲೇ ಇಳಿಸಿ ಅಲ್ಲಿಂದ ಹೊರಟುಹೋಗಿದ್ದಾನೆ. ತದನಂತರ ಆ ಯುವತಿ ತೀವ್ರ ಆತಂಕದ ನಡುವೆಯೇ ಮತ್ತೊಂದು ಆಟೋರಿಕ್ಷಾವನ್ನು ಹತ್ತಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ಷಾ ಕೇಂದ್ರವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ.
ಸಂತ್ರಸ್ತ ಯುವತಿ ದಾಖಲಿಸಿದ ದೂರಿನ ಅನ್ವಯ ಕರ್ನೂಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿತಲ್ಲದೆ, ಯುವತಿಗೆ ಸೂಕ್ತ ಪರಿಹಾರ ನೀಡುವಂತೆ 'ಓಲಾ' ಕಂಪನಿಗೆ ಆದೇಶಿಸಿತು. ಈ ವೇಳೆ ಕೋರ್ಟ್‌ನಲ್ಲಿ ವಾದ ಮಂಡಿಸಿದ ಓಲಾ ಸಂಸ್ಥೆಯು, ನಾವು ಕೇವಲ ಚಾಲಕರು ಮತ್ತು ಪ್ರಯಾಣಿಕರನ್ನು ಸಂಪರ್ಕಿಸುವ ಆನ್‌ಲೈನ್ ವೇದಿಕೆಯಷ್ಟೇ ಆಗಿದ್ದು, ಚಾಲಕರ ವೈಯಕ್ತಿಕ ನಡವಳಿಕೆಗೆ ಕಂಪನಿ ಜವಾಬ್ದಾರಿಯಲ್ಲ ಎಂದು ವಾದಿಸಿ ಜಾರಿಕೊಳ್ಳಲು ಯತ್ನಿಸಿತು. ಆದಾಗ್ಯೂ, ತಾಂತ್ರಿಕ ನೆಪಗಳನ್ನೊಡ್ಡಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ ಓಲಾ ಕಂಪನಿಯ ಈ ಎಲ್ಲಾ ವಾದಗಳನ್ನು ಗ್ರಾಹಕ ನ್ಯಾಯಾಲಯವು ಸಂಪೂರ್ಣವಾಗಿ ತಿರಸ್ಕರಿಸಿತು.
ಗ್ರಾಹಕರು ಕಂಪನಿಯ ವಿಶ್ವಾಸಾರ್ಹತೆ ಮತ್ತು ನಂಬಿಕೆಯ ಆಧಾರದ ಮೇಲೆಯೇ ಇಂತಹ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಆದ್ದರಿಂದ ಸಂಸ್ಥೆಯು ಈ ಘಟನೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ಅಂತಿಮವಾಗಿ, ತೀವ್ರ ಮಾನಸಿಕ ನೆಮ್ಮದಿ ಕೆಡಿಸಿದ್ದಕ್ಕಾಗಿ ದೂರುದಾರ ಯುವತಿಗೆ ಬರೋಬ್ಬರಿ 50,000 ರೂ. ಪರಿಹಾರ ಹಾಗೂ ಕೋರ್ಟ್ ವೆಚ್ಚದ ಬಾಬ್ತು 5,000 ರೂ. ಪಾವತಿಸುವಂತೆ ಗ್ರಾಹಕ ನ್ಯಾಯಾಲಯವು ಓಲಾ ಕಂಪನಿಗೆ ಖಡಕ್ ಆದೇಶ ನೀಡಿದೆ, (ಏಜೆನ್ಸೀಸ್​).