ವ್ಯಕ್ತಿಯೊಬ್ಬನ ಜೀವ ಉಳಿಸಿದ ಪಾಟ್ನಾ Traffic Police (ಚಿತ್ರ X)
ಪಾಟ್ನಾ: ಸಿಐಎಸ್ಎಫ್ ಜವಾನನೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದು, ಈ ವೇಳೆ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ (Traffic Police) ಟ್ರಾಫಿಕ್ ಪೊಲೀಸರು ಅವರ ಜೀವವನ್ನು ಉಳಿಸಲು ಹೇಗೆ ಹೋರಾಡಿದರು ಎಂಬ ವಿಡಿಯೋವೊಂದನ್ನು ಬಿಹಾರ ಪೊಲೀಸರು ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ಘಟನೆ ಏನು?
ಬಿಹಾರದ ಜನನಿಬಿಡ ರಸ್ತೆಯೊಂದರಲ್ಲಿ ಜವಾನರೊಬ್ಬರು ನಡೆದುಕೊಂಡ ಹೋಗುತ್ತಿರುವಾಗ ಅಸ್ವಸ್ಥತೆ ಉಂಟಾಗಿ ರಸ್ತೆಯ ಮಧ್ಯದಲ್ಲೇ ಕುಸಿದು ಬಿದ್ದರು. ಈ ವೇಳೆ ಆತ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿರುವುದನ್ನು ನೋಡಿದ ಕಾನ್ಸ್ಟೆಬಲ್ ತಕ್ಷಣವೇ ಸಿಪಿಆರ್ ನೀಡಲು ಮುಂದಾದರು. ಜನದಟ್ಟಣೆಯ ನಡುವೆಯೂ ಧೃತಿಗೆಡದೆ, ವೈದ್ಯಕೀಯ ನೆರವು ಬರುವವರೆಗೂ ನಿರಂತರವಾಗಿ ಎದೆಯನ್ನು ಒತ್ತುತ್ತಾ ಜವಾನನ ಪ್ರಾಣ ಉಳಿಸಲು ಹೋರಾಡಿದರು.
ಈ ಘಟನೆ ಅಲ್ಲಿನ ಕ್ಯಾಮರಾಗಳಲ್ಲಿ ಸೆರೆಯಾದ ನಂತರ ಬಿಹಾರ ಪೊಲೀಸರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಿಹಾರ ಪೊಲೀಸರು ಯಾವಾಗಲೂ ನಿಮ್ಮೊಂದಿಗೆ. ಪ್ರತಿ ಬಿಕ್ಕಟ್ಟಿನಲ್ಲಿಯೂ ನಿಮ್ಮೊಂದಿಗೆ, ಪ್ರತಿ ಪರಿಸ್ಥಿತಿಯಲ್ಲೂ ನಿಮ್ಮೊಂದಿಗೆ ನಿಲ್ಲುತ್ತಾರೆ. ನಿಮ್ಮ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.
ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಸಂಭವಿಸಿದಾಗ ಪ್ರತಿ ಸೆಕೆಂಡು ಕೂಡ ಅಮೂಲ್ಯ. ಅಂತಹ ಸಂದರ್ಭದಲ್ಲಿ ಸಿಪಿಆರ್ ಅನ್ನು ಸರಿಯಾಗಿ ಮತ್ತು ಸಮಯೋಚಿತವಾಗಿ ನೀಡಿದಾಗ, ವೃತ್ತಿಪರ ವೈದ್ಯಕೀಯ ಸಹಾಯ ಲಭ್ಯವಾಗುವವರೆಗೆ ಉಸಿರಾಟ ಮತ್ತು ರಕ್ತಪರಿಚಲನೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರತಿಕ್ರಿಯಿಸಿದ್ದು, ಈ ವಿಡಿಯೋ ಜಾಗೃತಿ ಮತ್ತು ಮೂಲಭೂತ ಜೀವ ಉಳಿಸುವ ಕೌಶಲ್ಯಗಳು ಎಷ್ಟು ಮುಖ್ಯ ಎಂಬುದರ ಪ್ರಬಲ ಜ್ಞಾಪನೆ ಎಂದು ಕರೆದಿದ್ದಾರೆ. ಇಂತಹ ಘಟನೆಗಳು ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಸಿಪಿಆರ್ ತರಬೇತಿಯ ಮಹತ್ವವನ್ನು ಒತ್ತಿ ಹೇಳುತ್ತದೆ (ಏಜೆನ್ಸೀಸ್).