Constable arrested 
ದೇಶ

ತುಟಿಗೆ ಲಿಪ್​ಸ್ಟಿಕ್​​ ಹಾಕಿ, ಬುರ್ಖಾ ಧರಿಸಿ.. ತಲೆ ಮರಿಸಿಕೊಂಡಿದ್ದ ಕಾನ್ಸ್ಟೇಬಲ್​ ಬಂಧನ: ಅಸಲಿಗೆ ಈತನ ತಪ್ಪೇನು..?

ಉತ್ತರಪ್ರದೇಶ: ರಾಜಸ್ಥಾನದ ಧೊಲ್ಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಅಮಾನತುಗೊಂಡ ಕಾನ್​ಸ್ಟೇಬಲ್​ನನ್ನು ಬುಧವಾರ ಉತ್ತರಪ್ರದೇಶದ ವೃಂದಾವನದಲ್ಲಿ ಬಂಧಿಸಲಾಗಿದೆ.
ಪೊಲೀಸರ ಕಣ್ಣಿಗೆ ಮಣ್ಣೆರಚಲು ಮಹಿಳೆಯ ವೇಷ(ಬುರ್ಖಾ) ಧರಿಸಿ, ತುಟಿಗೆ ಲಿಪ್​ಸ್ಟಿಕ್​ ಹಾಕಿ ತಪ್ಪಿಸಿಕೊಂಡು ಅಡಗಿಕೊಂಡಿದ್ದರೂ, ಸಿನಿಮಾ ಶೈಲಿಯಲ್ಲಿ ರೋಚಕ ಬಂಧನವಾಗಿದೆ.

ಘಟನೆ ಏನು..?

ಆರೋಪಿ ರಾಂಭರೋಸ್ ಅಲಿಯಾಸ್ ರಾಜೇಂದ್ರ ಸಿಸೋಡಿಯಾ ಡಿಸೆಂಬರ್ 15 ರಂದು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಂಗ್ವಾನ್ ಅವರ ಪ್ರಕಾರ, ಸಿಸೋಡಿಯಾ ಹದಿಹರೆಯದ ಬಾಲಕಿ ಮತ್ತು ಆಕೆಯ ಸಹೋದರನನ್ನು ಕೆಲಸದ ಭರವಸೆ ನೀಡಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ನಂತರ ಸಹೋದರನನ್ನು ಮಾರುಕಟ್ಟೆಗೆ ಕಳುಹಿಸಿ ಹುಡುಗಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತೆ ಕಿರಿಚಿದಾಗ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದರು; ಆದಾಗ್ಯೂ, ದೊಡ್ಡ ಸಾರ್ವಜನಿಕ ಪ್ರತಿಭಟನೆಯ ನಡೆಯವೆಯೂ ಆರೋಪಿ ಪರಾರಿಯಾಗಿದ್ದಾನೆ.

ವೇಷ ಬದಲಿಸಿದರೂ ತಪ್ಪದ ಬಂಧನ..

ವೇಷ ಬದಲಿಸಿದರೂ ತಪ್ಪದ ಬಂಧನ ಅತ್ಯಾಚಾರದಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತಿದ್ದ ಈ ಮಾಜಿ ಪೊಲೀಸ್ ಅಧಿಕಾರಿ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದ್ದ. ಪೊಲೀಸರು ತನ್ನನ್ನು ಗುರುತಿಸಬಾರದೆಂಬ ಕಾರಣಕ್ಕೆ ಈತ ಸೀರೆ ಉಟ್ಟು, ವಿಗ್ ಧರಿಸಿ, ಸಂಪೂರ್ಣವಾಗಿ ಮಹಿಳೆಯಂತೆ ವೇಷ ಬದಲಿಸಿಕೊಂಡಿದ್ದ. ತನ್ನ ನಡಿಗೆ, ಹಾವಭಾವಗಳನ್ನೂ ಬದಲಿಸಿ ಜನನಿಬಿಡ ಪ್ರದೇಶಗಳಲ್ಲಿ ವಾಸಿಸುತ್ತಾ ಪೊಲೀಸರನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಜಾಲಕ್ಕೆ ಬಿದ್ದಿದ್ದು ಹೇಗೆ?

ಆರೋಪಿಯು ಪದೇ ಪದೇ ತನ್ನ ವಾಸಸ್ಥಳವನ್ನು ಬದಲಿಸುತ್ತಿದ್ದರೂ, ಆತನ ಮೊಬೈಲ್ ಕರೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಆತನ ಇರವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಆತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕ ತಕ್ಷಣ, ಸಾದಾ ಉಡುಪಿನಲ್ಲಿದ್ದ ಪೊಲೀಸರ ತಂಡ ಆ ಪ್ರದೇಶವನ್ನು ಸುತ್ತುವರಿಯಿತು. ಆರಂಭದಲ್ಲಿ ಮಹಿಳೆಯ ವೇಷದಲ್ಲಿದ್ದ ಆತನನ್ನು ಗುರುತಿಸುವುದು ಕಷ್ಟವಾಯಿತಾದರೂ, ಆತನ ನಡವಳಿಕೆ ಮತ್ತು ಶರೀರದ ಭಾಷೆಯಲ್ಲಿ ಅನುಮಾನ ವ್ಯಕ್ತವಾಯಿತು. ತೀವ್ರ ವಿಚಾರಣೆ ನಡೆಸಿದಾಗ ಮತ್ತು ವೇಷವನ್ನು ಸರಿಯಾಗಿ ಪರಿಶೀಲಿಸಿದಾಗ ಆತನೇ ತಲೆಮರೆಸಿಕೊಂಡಿದ್ದ ಕಾನ್​ಸ್ಟೇಬಲ್​​ ಎಂಬುದು ದೃಢಪಟ್ಟಿತು.
ಕಾನೂನು ತಿಳಿದಿದ್ದರೂ ಮಹಿಳೆಯ ವೇಷ ಧರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆತನ ಕೃತ್ಯಕ್ಕೆ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ,(ಏಜೆನ್ಸೀಸ್​).