Sanchita Ugale 
ದೇಶ

ಸಂಚಿತಾ ಉಗಲೆ ಸಾವಿಗೆ ಸುಶಾಂತ್ ಸಿಂಗ್ ರಾಜ್‌ಪೂತ್ ಪ್ರಕರಣದ ನಂಟು? ನಟಿಯ ಸಹೋದರನಿಂದ ಹೊಸ ಹೇಳಿಕೆ | Sanchita Ugale

ಮುಂಬೈ: 22 ವರ್ಷದ ಕಿರುತೆರೆ ನಟಿ ಸಂಚಿತಾ ಉಗಲೆ(Sanchita Ugale) ಅವರ ಅಕಾಲಿಕ(ಆತ್ಮಹತ್ಯೆ) ಸಾವಿನ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ನಟಿಯ ಸಹೋದರ ಆಕಾಶ್ ಸತೀಶ್ ಉಗಲೆ, ಸಂಚಿತಾ ಸಾವನ್ನು ದಿವಂಗತ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಅವರ ಸಾವಿನ ಪ್ರಕರಣದೊಂದಿಗೆ ಹೋಲಿಕೆ ಮಾಡಿದ್ದು, ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
‘ಕುಂಕುಮ್ ಭಾಗ್ಯ’ ಮತ್ತು ‘ವಾಗ್ಲೆ ಕಿ ದುನಿಯಾ’ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿದ್ದ ಸಂಚಿತಾ ಉಗಲೆ ಜೂನ್ 14ರಂದು ಮೃತಪಟ್ಟಿದ್ದರು. ಅವರ ಸಾವಿನ ಕುರಿತು ತನಿಖೆ ಮುಂದುವರಿದಿರುವಾಗಲೇ ಕುಟುಂಬ ಸದಸ್ಯರ ಹೇಳಿಕೆಗಳು ಗಮನ ಸೆಳೆಯುತ್ತಿವೆ.
ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ನೀಡಿದ ಹೇಳಿಕೆಯಲ್ಲಿ ಸಂಚಿತಾ ಅವರ ಸಹೋದರ ಆಕಾಶ್, “ಸಂಚಿತಾ ಮತ್ತು ಸುಶಾಂತ್ ಇಬ್ಬರೂ ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಒತ್ತಡವನ್ನು ಎದುರಿಸಿದ್ದರು” ಎಂದು ಹೇಳಿದ್ದಾರೆ. ಇದೇ ಕಾರಣದಿಂದ ಇಬ್ಬರ ಘಟನೆಗಳ ನಡುವೆ ಕೆಲವು ಸಾಮ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಕಾಶ್ ಉಗಲೆ ಮತ್ತೊಂದು ಅಂಶವನ್ನೂ ಉಲ್ಲೇಖಿಸಿದ್ದಾರೆ. ಸುಶಾಂತ್ ಸಿಂಗ್ ರಾಜ್‌ಪೂತ್ 2020ರ ಜೂನ್ 14ರಂದು ಮೃತಪಟ್ಟಿದ್ದರು. ಸಂಚಿತಾ ಉಗಲೆ ಕೂಡ ಜೂನ್ 14ರಂದೇ ಸಾವನ್ನಪ್ಪಿದ್ದಾರೆ. ಈ ದಿನಾಂಕದ ಸಾಮ್ಯತೆಯನ್ನು ಅವರು ಪ್ರಸ್ತಾಪಿಸಿದ್ದಾರೆ.
ಇದರ ಜೊತೆಗೆ, ಸಾವಿಗೆ ಮುನ್ನ ಸಂಚಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ರಾಜ್‌ಪೂತ್ ಅವರಿಗೆ ಗೌರವ ಸಲ್ಲಿಸುವ ವಿಡಿಯೊ ಹಂಚಿಕೊಂಡಿದ್ದರು ಎನ್ನಲಾಗಿದೆ. “It’s Again 14 June” ಎಂಬ ಸಂದೇಶದೊಂದಿಗೆ ಅವರು ಪೋಸ್ಟ್ ಮಾಡಿದ್ದ ರೀಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಸಂಚಿತಾ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಕುಟುಂಬದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಹಲವು ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇತ್ತ ಮನರಂಜನಾ ಕ್ಷೇತ್ರದ ಕೆಲ ಕಲಾವಿದರು ಕೂಡ ಸಂಚಿತಾ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಆಂಚಲ್ ಖುರಾನಾ, ಕಿರುತೆರೆ ಮತ್ತು ಮನರಂಜನಾ ಕ್ಷೇತ್ರದಲ್ಲಿ ಕಲಾವಿದರು ಎದುರಿಸುವ ಒತ್ತಡಗಳ ಬಗ್ಗೆ ಮಾತನಾಡಿದ್ದು, ಈ ಘಟನೆ ಮತ್ತೆ ಮಾನಸಿಕ ಆರೋಗ್ಯದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಸಂಚಿತಾ ಉಗಲೆ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಕಿರು ಅವಧಿಯಲ್ಲೇ ಜನಪ್ರಿಯತೆ ಗಳಿಸಿದ್ದರು. ‘ಕುಂಕುಮ್ ಭಾಗ್ಯ’, ‘ವಾಗ್ಲೆ ಕಿ ದುನಿಯಾ’, ‘ದಿಲ್‌ವಾಲಿ ದುಲ್ಹಾ ಲೇ ಜಾಯೇಗಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ‘ಛಾವಾ’ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಅವರ ಅಕಾಲಿಕ ಸಾವು ಅಭಿಮಾನಿಗಳು ಮತ್ತು ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಆಘಾತ ಉಂಟುಮಾಡಿದೆ,(ಏಜೆನ್ಸೀಸ್​​).