ನವದೆಹಲಿ: ಭಾರತ್ ಮಂಟಪದಲ್ಲಿ ನಡೆದ ಎಐ ಶೃಂಗಸಭೆ (AI Summit) ವೇಳೆ ಉಂಟಾದ ಗೊಂದಲಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶನಿವಾರ ಸ್ಥಳೀಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಅಲ್ಲಿನ ಅವ್ಯವಸ್ತೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಇದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ರೂಪಿಸಿದ ಪೂರ್ವಯೋಜಿತ ಪಿತೂರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರತಿಭಟನೆ ಕೇವಲ ಒಂದು ಸ್ಥಳೀಯ ಆಕ್ರೋಶವಲ್ಲ, ಅಂತರಾಷ್ಟ್ರೀಯ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ದೇಶದ ವರ್ಚಸ್ಸನ್ನು ಕುಗ್ಗಿಸಲು ಯುವ ಕಾಂಗ್ರೆಸ್ ಘಟಕವು ನಡೆಸಿದ ಷಡ್ಯಂತ್ರ, ಅಲ್ಲಿ ಭಾಗವಹಿಸಿದವರೆಲ್ಲರೂ ನೇಪಾಳದ ಜೆನ್ ಜಿ ಪ್ರತಿಭಟನೆಯಿಂದ ಪ್ರೇರಿತರಾದವರಾಗಿದ್ದು, ಅದನ್ನು ಶೃಂಗಸಭೆಯಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕಳಂಕ ತರುವ ಪಿತೂರಿ ನಡೆಯುತ್ತಿದೆ ಎಂದು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದು, ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು 5 ದಿನಗಳ ಕಸ್ಟಡಿಗೆ ನೀಡುವಂತೆ ಕೋರಿದ್ದಾರೆ, ಅದರಂತೆ ನ್ಯಾಯಾಲಯವು ಆರೋಪಿಗಳನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಎಐ ಶೃಂಗಸಭೆ
ಭಾರತ್ ಮಂಟಪದಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಶನಿವಾರ ಬೆಳಿಗ್ಗೆ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಂಧಿತ ವ್ಯಕ್ತಿಗಳನ್ನು ಕೃಷ್ಣ ಹರಿ, ಕುಂದನ್ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಹ ಯಾದವ್ ಎಂದು ಗುರುತಿಸಲಾಗಿದೆ.
ಇದು ಪ್ರತಿಭಟಿಸುವ ಹಕ್ಕು
ಆರೋಪಿಗಳು ರಾಜಕೀಯ ಪಕ್ಷದ ಸದಸ್ಯರಾಗಿದ್ದು, ಪ್ರತಿಭಟಿಸುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುವಾಗ ಭಾರತ್ ಮಂಟಪದಲ್ಲಿ ಆಂದೋಲನ ನಡೆಸಿದ್ದಾರೆ ಎಂದು ಪ್ರತಿವಾದಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆ ಶಾಂತಿಯುತವಾಗಿತ್ತು, ಯಾವುದೇ ವಿಡಿಯೋಗಳಲ್ಲೂ ಹಿಂಸಾಚಾರ ಕಂಡುಬಂದಿಲ್ಲ. ಎಲ್ಲಾ ಆಪಾದಿತ ಅಪರಾಧಗಳಿಗೆ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಎಫ್‌ಐಆರ್ ರಾಜಕೀಯ ನಡೆಯಲ್ಲದೆ ಬೇರೇನೂ ಅಲ್ಲ ಎಂದು ವಾದಿಸಿರುವ ಆರೋಪಿಗಳ ಪರ ವಕೀಲರು, ಅವರು ವಿದ್ಯಾವಂತರು ಮತ್ತು ಪದವಿಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಆರೋಪಿಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಮತ್ತು ಪ್ರಧಾನಿ ವಿರುದ್ಧ ಸಂದೇಶಗಳನ್ನು ಹೊಂದಿರುವ ಟೀ ಶರ್ಟ್‌ಗಳನ್ನು ಧರಿಸಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದಾರೆ.
ಗಣ್ಯರ ಸಮ್ಮುಖದಲ್ಲಿ ದೇಶ ವಿರೋಧಿ ಘೋಷಣೆಗಳು: ಪೊಲೀಸರು
ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ನಾಯಕರು ಮತ್ತು ಇತರ ಪ್ರಮುಖರ ಸಮ್ಮುಖದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಪರಾರಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಆರೋಪಿಗಳ ಕಸ್ಟಡಿ ಅಗತ್ಯ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದು, ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ, ಈ ಘಟನೆಗೆ ಸಂಬಂಧಪಟ್ಟಂತೆ ಯಾವ ಮೂಲದಿಂದಾದರು ಹಣ ಬಂದಿದೆಯೇ ಎಂದು ಪರಿಶೀಲಿಸಲು ಅವರ ಮೊಬೈಲ್ ಫೋನ್‌ಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಫೆಬ್ರವರಿ 20, 2026ರಂದು (ಶುಕ್ರವಾರ) ದೆಹಲಿಯ ಭಾರತ್ ಮಂಟಪದಲ್ಲಿ ಅಂತರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ' ನಡೆಯುತ್ತಿತ್ತು. ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು(ಏಜೆನ್ಸೀಸ್).