ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ
ಚಂಡೀಗಢ: ಹರಿಯಾಣ ವಿಧಾನಸಭೆಯ ಚಳಿಗಾಲದ ಅಧಿವೇಶನ ಇಂದು (ಗುರುವಾರ ಡಿ.18) ಆರಂಭವಾಗಲಿದ್ದು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಚಿಂತನೆ ನಡೆಸುತ್ತಿದ್ದು. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸೈನಿ, ಸರ್ಕಾರವು ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಸಿದ್ಧವಾಗಿದೆ ಎಂದು ಹೇಳಿದರು.
ಕಾರ್ಯವಿಧಾನದ ಸಮಯದ ನಿರ್ಬಂಧಗಳ ಹೊರತಾಗಿಯೂ, ಚಳಿಗಾಲದ ಅಧಿವೇಶನವನ್ನು ಕರೆಯುವ ಮೂಲಕ ಸರ್ಕಾರ ವಿರೋಧ ಪಕ್ಷಗಳೊಂದಿಗೆ ತೊಡಗಿಸಿಕೊಳ್ಳುವ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದರು.
ನಾವು ಪ್ರತಿಯೊಂದು ವಿಷಯದ ಎಲ್ಲ ಪ್ರಶ್ನೆಗೂ ಉತ್ತರ ನೀಡಲು ಮತ್ತು ಚರ್ಚಿಸಲು ಸಿದ್ಧರಿದ್ದೇವೆ. ಬಜೆಟ್ ಅಧಿವೇಶನ ಇದೀಗ ಮುಕ್ತಾಯಗೊಂಡಿದ್ದು, ಮತ್ತೊಂದು ಅಧಿವೇಶನವನ್ನು ಕರೆಯಬೇಕಾದರೆ, ಆರು ತಿಂಗಳ ಬಳಿಕ ಕರೆಯಬಹುದು. ಇದರ ಹೊರತಾಗಿಯೂ, ನಾವು ಈ ಚಳಿಗಾಲದ ಅಧಿವೇಶನವನ್ನು ಕರೆದಿದ್ದೇವೆ ಎಂದು ಸೈನಿ ತಿಳಿಸಿದ್ದು, ಸದನದಲ್ಲಿ ವಿಷಯಗಳ ಚರ್ಚೆಯಾದಾಗ ಕಾಂಗ್ರೆಸ್ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದೆ ಮತ್ತು ಸಭಾತ್ಯಾಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಶಾಸಕರೊಂದಿಗೆ ಭೂಪಿಂದರ್ ಹೂಡಾ ಸಭೆ
ಹರಿಯಾಣ ವಿಧಾನಸಭೆಯ ವಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಮಂಗಳವಾರ ಪಕ್ಷದ ಮುಖಂಡರು ಮತ್ತು ಶಾಸಕರ ಸಭೆ ಕರೆದಿದ್ದು, ಮತ ಕಳ್ಳತನದ ಹೇಳಿಕೆಯನ್ನು ಪುನರುಚ್ಚರಿಸಿದರು, ಬಿಜೆಪಿಯ ನೈಜ ಮುಖ ಅನಾವರಣಗೊಂಡಿದೆ. ಬಹಿರಂಗಪಡಿಸಲು ಅವಿಶ್ವಾಸ ನಿರ್ಣಯವನ್ನು ತರಲಾಗುವುದು ಎಂದು ಹೇಳಿದರು.
ಹರಿಯಾಣ ವಿಧಾನಸಭಾ ಅಧಿವೇಶನದಲ್ಲಿ ನಾವು ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ. ಇಂದು ನಾವು ಚಂಡೀಗಢ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದ್ದೇವೆ. ಮತ ಕಳ್ಳತನ, ಸರ್ಕಾರ ರಚಿಸಲು ಸರ್ಕಾರಿ ಯಂತ್ರೋಪಕರಣಗಳ ದುರುಪಯೋಗ, ಚುನಾವಣೆಗೆ ಮುನ್ನ ಅಕ್ರಮ ಪ್ರಚೋದನೆಗಳು ಮತ್ತು ನಕಲಿ ಮತದಾರರಂತಹ ತಂತ್ರಗಳ ಮೂಲಕ ಈ ಸರ್ಕಾರವನ್ನು ರಚಿಸಲಾಗಿದೆ. ಇದೆಲ್ಲವನ್ನೂ ಸದನದಲ್ಲಿ ಬಹಿರಂಗಪಡಿಸಲಾಗುವುದು ಎಂದರು. ಹೆಚ್ಚುತ್ತಿರುವ ನಿರುದ್ಯೋಗ, ಕ್ರೀಡಾ ಸೌಲಭ್ಯಗಳ ಕಳಪೆ ಸ್ಥಿತಿ, ನೀರಿನ ಸಮಸ್ಯೆ ಪರಿಹಾರ, ಕಾನೂನು ಮತ್ತು ಸುವ್ಯವಸ್ಥೆ, ಭ್ರಷ್ಟಾಚಾರ, ಚಂಡೀಗಢ ವಿವಾದ ಮತ್ತು SYL ನಂತಹ ಪ್ರಮುಖ ವಿಷಯಗಳಲ್ಲಿ ಸರ್ಕಾರವನ್ನು ಮೂಲೆಗುಂಪು ಮಾಡಲಾಗುತ್ತದೆ. ಹರಿಯಾಣದ ಹಕ್ಕುಗಳು ಮತ್ತು ಜನರ ಪರ ಧ್ವನಿ ಎತ್ತಲಾಗುವುದು ಎಂದು ಹೇಳಿದರು.
ಬಿಜೆಪಿ ಅಗತ್ಯಚವಿರುವಷ್ಟು ಬಹುಮತವನ್ನು ಹೊಂದಿದ್ದು, 48 ಬಿಜೆಪಿ ಶಾಸಕರು ಮತ್ತು ಮೂವರು ಸ್ವತಂತ್ರರು ಸೇರಿದಂತೆ 51 ಶಾಸಕರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಸದನದಲ್ಲಿ 37 ಶಾಸಕರನ್ನು ಹೊಂದಿದ್ದರೆ, ಐಎನ್‌ಎಲ್‌ಡಿ ಇಬ್ಬರು ಶಾಸಕರನ್ನು ಹೊಂದಿದೆ. ಈ ಸಂಖ್ಯಾಬಲ ಗಮನಿಸಿದರೆ, ಸೈನಿ ಸರ್ಕಾರ ಅವಿಶ್ವಾಸ ನಿರ್ಣಯದಲ್ಲಿ ಪಾಸ್ ಆಗುವುದು ಪಕ್ಕಾ ಆಗಿದೆ(ಏಜೆನ್ಸೀಸ್).