ಎನ್​ಸಿಪಿ(ಎಸ್​ಪಿ) ಮುಖ್ಯಸ್ಥ ಶರದ್ ಪವಾರ್ 
ದೇಶ

ಮಹಾರಾಷ್ಟ್ರದಲ್ಲಿ ಏಳು ರಾಜ್ಯಸಭಾ ಸ್ಥಾನಗಳಲ್ಲಿ ಒಂದೇ ಗೆಲ್ಲುವ ಅವಕಾಶ; ಶರದ್ ಪವಾರ್​ಗೆ ಕಾಂಗ್ರೆಸ್ ಬೆಂಬಲ | Sharad Pawar

ಮುಂಬೈ: ಮಹಾರಾಷ್ಟ್ರದಿಂದ ರಾಜ್ಯಸಭೆ ಚುನಾವಣೆಯಲ್ಲಿ ಖಾಲಿ ಇರುವ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಒಂದೇ ಸ್ಥಾನ ಗೆಲ್ಲುವ ಅವಕಾಶವಿರುವುದರಿಂದ ಅಭ್ಯರ್ಥಿಯಾಗಿ ಎನ್​ಸಿಪಿ(ಎಸ್​ಪಿ) ಮುಖ್ಯಸ್ಥ ಶರದ್ ಪವಾರ್(Sharad Pawar) ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿದೆ.
ಈ ಕುರಿತು ಬುಧವಾರ(ಮಾ. 04) ಪಿಟಿಐ ಜೊತೆ ಮಾತನಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ, ಮಾ. 16ರಂದು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಸದಸ್ಯರಾಗಿರುವ ಶರದ್ ಪವಾರ್ ಅವರನ್ನು ಬೆಂಬಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ನಾಳೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೂರು ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಹಾಗೂ ಶಿವಸೇನೆ (ಯುಬಿಟಿ) ವಿಧಾನಸಭೆಯಲ್ಲಿ ತಮ್ಮ ಬಲವನ್ನು ಪರಿಗಣಿಸಿ ರಾಜ್ಯದಿಂದ ವಿರೋಧ ಪಕ್ಷಗಳ ಮೈತ್ರಿಕೂಟ ಗೆಲ್ಲಬಹುದಾದ ಏಕೈಕ ಸ್ಥಾನಕ್ಕೆ ಹಕ್ಕು ಮಂಡಿಸಿದ್ದವು. ಆದರೆ ನಡೆಯುವ ಏಳು ಸ್ಥಾನಗಳಲ್ಲಿ ವಿಪಕ್ಷಗಳು ಒಂದನ್ನು ಮಾತ್ರ ಗೆಲ್ಲಬಹುದಾಗಿದೆ.
ಇನ್ನೂ ಮಹಾರಾಷ್ಟ್ರದ ವಿಧಾನಸಭೆಯ ಸಂಖ್ಯಾಬಲ 288, ಆದರೆ ಅಹಲ್ಯಾನಗರ ಜಿಲ್ಲೆಯ ರಾಹುರಿಯಿಂದ ಆಯ್ಕೆಯಾದ ಶಿವಾಜಿರಾವ್ ಕಾರ್ಡಿಲೆ (ಬಿಜೆಪಿ) ಮತ್ತು ಪುಣೆ ಜಿಲ್ಲೆಯ ಬಾರಾಮತಿಯನ್ನು ಪ್ರತಿನಿಧಿಸಿದ್ದ ಅಜಿತ್ ಪವಾರ್ ನಿಧನದಿಂದ 286ಕ್ಕೆ ಇಳಿದಿದೆ. ಅಭ್ಯರ್ಥಿ ಆಯ್ಕೆಯಾಗಲು ಮೊದಲ ಪ್ರಾಶಸ್ತ್ಯದ ಮತಗಳ ಸಂಖ್ಯೆ 36 ಆಗಿದೆ.
ಶಿವಸೇನೆ(ಯುಬಿಟಿ) 20, ಕಾಂಗ್ರೆಸ್ (16) ಹಾಗೂ ಎನ್‌ಸಿಪಿ-ಎಸ್‌ಪಿ(10) ಶಾಸಕರನ್ನು ಹೊಂದಿದೆ. ಹಿರಿಯ ನಾಯಕ ಶರದ್ ಪವಾರ್ ಅವರನ್ನು ಗೆಲ್ಲುವ ಏಕೈಕ ಸ್ಥಾನಕ್ಕೆ ನಿಲ್ಲಿಸಿ ಬೆಂಬಲಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದೆ (ಏಜೆನ್ಸೀಸ್).