Kerala Congress | ಕಾಂಗ್ರೆಸ್ಗೆ ಕೈ ಕೊಟ್ಟ 8 ಸದಸ್ಯರು
ತಿರುವನಂತಪುರಂ: ಕೇರಳದಲ್ಲಿನ ಬಿಜೆಪಿಯ ಸಂಘಟನೆ ದಿನ ಕಳೆದಂತೆ ಬಲಗೊಳ್ಳುತ್ತಿದ್ದು, ತ್ರಿಶೂರ್ ಜಿಲ್ಲೆಯ ಮತ್ತತ್ತೂರು ಗ್ರಾಮ ಪಂಚಾಯತಿಯ ಕಾಂಗ್ರೆಸ್‌ನ 8 ಚುನಾಯಿತ ಪ್ರತಿನಿಧಿಗಳು ಪಕ್ಷಕ್ಕೆ ರಾಜೀನಾಮೆ ನೀಡಿ, ಕಮಲದ ತೆಕ್ಕೆಗೆ ಜಾರಿದ್ದು, ಇದು ಹಸ್ತ ಪಾಳಯಕ್ಕೆ ಭಾರಿ ಹಿನ್ನಡೆ ತಂದಿದೆ.
ಮತ್ತತ್ತೂರು ಪಂಚಾಯತಿಯ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಹೊಸ ಆಡಳಿತ ಒಕ್ಕೂಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಟಿಕೆಟ್ ಸಿಗದೆ ಪಕ್ಷೇತರನಾಗಿ ಚುನಾವಣೆ ಗೆದ್ದ ಟೆಸ್ಸಿ ಜೋಸ್ ಕಲ್ಲರಕ್ಕಲ್, ಬಂಡಾಯ ಕಾಂಗ್ರೆಸ್ ಸದಸ್ಯರು ಮತ್ತು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದರು, ಮತ್ತತ್ತೂರಿನಲ್ಲಿ 23 ವರ್ಷಗಳ ಎಡಪಕ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದರು.
ಪಕ್ಷಗಳ ಬಲಾಬಲ- ಎಡ ಪ್ರಜಾಸತ್ತಾತ್ಮಕ ರಂಗ (LDF) 10, ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (UDF) 8, NDA 4, ಮತ್ತು 2 ಸ್ವತಂತ್ರರು. ಎರಡೂ ಕಡೆಯವರು ಹತ್ತಿರದಲ್ಲಿದ್ದ ಕಾರಣ, ಅಧ್ಯಕ್ಷರನ್ನು ಆಯ್ಕೆ ಮಾಡಲು ಲಾಟರಿ ಎತ್ತುವ ಬಗ್ಗೆಯೂ ಪರಿಗಣಿಸಲಾಗುತ್ತಿತ್ತು. ಅಷ್ಟರಲ್ಲಿಯೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆದ್ದ ಕೆ.ಆರ್. ಔಸೆಫ್ ಅವರನ್ನು ಬೆಂಬಲಿಸಲು ಯುಡಿಎಫ್ ನಿರ್ಧರಿಸಿತು. ಈ ನಡುವೆ ಪಂಚಾಯತ್ ಅಧ್ಯಕ್ಷರ ಚುನಾವಣೆಗೆ ಸ್ವಲ್ಪ ಮೊದಲು, ಔಸೆಫ್ ಎಲ್ಡಿಎಫ್ ಜೊತೆ ಕೈಜೋಡಿಸಿದರು, ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ.
ಈ ಎಲ್ಲ ಘಟನೆಗೆ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ ಎನ್ನಲಾಗಿದ್ದು, ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸುವ ಮೂಲಕ ಎಲ್ಡಿಎಫ್ನೊಂದಿಗೆ ಕೈ ಜೋಡಿಸಿದ್ದಾರೆ ಎಂದು ತಮ್ಮ ರಾಜೀನಾಮೆ ಪತ್ರಗಳಲ್ಲಿ ತಿಳಿಸಿದ್ದಾರೆ. ರಾಜೀನಾಮೆ ನೀಡಿದ ಬಳಿಕ, ಟೆಸ್ಸಿ ಜೋಸ್ ಬೆಂಬಲಿಸಲು ನಿರ್ಧರಿಸಿದರು. ಬಿಜೆಪಿ ಕೂಡ ಮೂರು ಮತಗಳೊಂದಿಗೆ ಅವರನ್ನು ಬೆಂಬಲಿಸಿತು (ಒಂದು ಬಿಜೆಪಿಯ ಒಂದು ಮತ ಅಮಾನ್ಯವಾಗಿತ್ತು) ಒಟ್ಟು 12 ಸದಸ್ಯರ ಬೆಂಬಲ ಪಡೆದ ಜೋಸ್ ಅಧ್ಯಕ್ಷರಾಗಿ ಆಯ್ಕೆಯಾದರು.
ರಾಜೀನಾಮೆ ನೀಡಿದ ಸದಸ್ಯರು- ಮಿನಿಮೋಲ್, ಶ್ರೀಜಾ, ಸುಮಾ ಆಂಟನಿ, ಅಕ್ಷಯ್ ಸಂತೋಷ್, ಪ್ರಿಂಟೊ ಪಲ್ಲಿಪರಂಬನ್, ಸಿಜಿ ರಾಜೇಶ್, ಸಿಬಿ ಪೌಲೋಸ್ ಮತ್ತು ನೂರ್ಜಹಾನ್ ನವಾಜ್. ಈ ಎಂಟು ಸದಸ್ಯರ ವಿರುದ್ಧ ಇದುವರೆಗೆ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ(ಏಜೆನ್ಸೀಸ್).