Congress RaijorDal Alliance
ದಿಸ್ಪೂರ್: ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ಪಕ್ಷ ಕೂಡ ತಯಾರಿ ನಡೆಸಿದ್ದು, ಆಡಳಿತಾರೂಢ ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಮತ್ತು ರೈಜೋರ್ ದಳ ಅಂತಿಮವಾಗಿ ಮೈತ್ರಿ (Congress RaijorDal Alliance) ಒಪ್ಪಂದಕ್ಕೆ ಸಹಿ ಹಾಕಿವೆ. ಜೋರ್ಹತ್‌ನಲ್ಲಿರುವ ಗೌರವ್ ಗೊಗೊಯ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಹೊರಬಿದ್ದಿದೆ.
ಮೈತ್ರಿ ಪ್ರಕಟಿಸಿದ ಬೆನ್ನಲ್ಲೇ ಮಾತನಾಡಿದ ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್, ಈ ಒಕ್ಕೂಟವನ್ನು ಜೋರ್ಹತ್‌ನ ಜನರಿಗೆ ಸಿಕ್ಕ ಐತಿಹಾಸಿಕ ಅವಕಾಶ ಎಂದು ಬಣ್ಣಿಸಿದರು. ಕೇವಲ ಸಮರ್ಥ ನಾಯಕರೊಂದಿಗೆ ಮಾತ್ರ ಮಾತನಾಡುವ ಅಹಂಕಾರಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಕಾಲ ಬಂದಿದೆ. ಅಸ್ಸಾಂನ ಅಸ್ಮಿತೆ ಉಳಿಸಲು ಜನರು ಈ ಬಾರಿ ಭಾರಿ ಬಹುಮತದೊಂದಿಗೆ ವಿರೋಧ ಪಕ್ಷಗಳನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಈ ಬಾರಿ ಕೇವಲ ಮೈತ್ರಿಗಷ್ಟೇ ಸೀಮಿತವಾಗದೆ, ಬಿಜೆಪಿಯನ್ನು ಸೋಲಿಸಲು ವಿಶಾಲ ವಿರೋಧ ಪಕ್ಷಗಳ ಒಕ್ಕೂಟವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಒಕ್ಕೂಟದಲ್ಲಿ ರೈಜೋರ್ ದಳ, ಅಸ್ಸಾಂ ಜಾತಿಯ ಪರಿಷತ್, ಸಿಪಿಐ (ಎಂ) ಮತ್ತು ಸಿಪಿಐ (ಎಂಎಲ್), ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ ಪಕ್ಷಗಳಿವೆ
ಈ ವಿಷಯವಾಗಿ ಮಾತನಾಡಿರುವ ಗೊಗೊಯ್, ಅಸ್ಸಾಂನ ಜನರು ಒಗ್ಗಟ್ಟಿನ ವಿರೋಧ ಪಕ್ಷವನ್ನು ನೋಡಲು ಬಯಸುತ್ತಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ವಿರುದ್ಧದ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಲು ನಾನು ನನ್ನ ವೈಯಕ್ತಿಕ ಶಕ್ತಿಯನ್ನೆಲ್ಲ ಧಾರೆ ಎರೆದಿದ್ದೇನೆ ಎಂದರು.
ಮೈತ್ರಿ ಕುರಿತು ರಾಜ್ಯ ಮಟ್ಟದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ ಗೊಗೊಯ್, ಈ ಪ್ರಸ್ತಾವನೆಯನ್ನು ಈಗಾಗಲೇ ರಾಷ್ಟ್ರೀಯ ನಾಯಕತ್ವದ ಮುಂದೆ ಇಟ್ಟಿರುವುದಾಗಿ ತಿಳಿಸಿದರು. ರಾಜ್ಯ ಅಧ್ಯಕ್ಷನಾಗಿ ನಾನು ವಾದಗಳನ್ನು ಮಂಡಿಸಿದ್ದೇನೆ. ಈ ಮೈತ್ರಿ ಪಕ್ಷಕ್ಕೆ ಮಾತ್ರವಲ್ಲ, ಇಡೀ ಅಸ್ಸಾಂಗೆ ಪ್ರಯೋಜನಕಾರಿಯಾಗಲಿದೆ. ಹೈಕಮಾಂಡ್‌ನಿಂದ ಅಂತಿಮ ಮುದ್ರೆ ಸಿಗುವ ಭರವಸೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಯದ ಅಭಾವ
ಚುನಾವಣಾ ಪ್ರಕ್ರಿಯೆಗೆ ಸಮಯ ತೀರಾ ಕಡಿಮೆ ಇದ್ದು, ಸೋಮವಾರದೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಿದೆ. ಇಷ್ಟೊಂದು ಒತ್ತಡದ ನಡುವೆಯೂ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಮತ್ತು ಸಿದ್ಧಾಂತದ ಹೊಂದಾಣಿಕೆ ಮಾಡಿಕೊಳ್ಳುವುದು ಗೊಗೊಯ್ಗೆ ದೊಡ್ಡ ಸವಾಲಾಗಿತ್ತು. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಗೆ ರಾಜ್ಯ ಸಿದ್ಧವಾಗಿದ್ದು, ನಾಮಪತ್ರ ಸಲ್ಲಿಕೆಗೆ ಮಾರ್ಚ್ 23 ಕೊನೆಯ ದಿನವಾಗಿದೆ. ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.
ಬಿಜೆಪಿ ಈಗಾಗಲೇ 88 ಅಭ್ಯರ್ಥಿಗಳನ್ನು ಘೋಷಿಸಿ ಅಬ್ಬರದ ಪ್ರಚಾರ ಆರಂಭಿಸಿದ್ದು, ಈಗ ಕಾಂಗ್ರೆಸ್ ನೇತೃತ್ವದ ಈ ಮಹಾ ಮೈತ್ರಿ ಬಿಜೆಪಿಯ ಕೋಟೆಯನ್ನು ಭೇದಿಸುತ್ತದೆಯೇ? ಅಥವಾ ಹಿಮಂತ ಬಿಸ್ವಾ ಶರ್ಮಾರ ತಂತ್ರಗಾರಿಕೆ ಮತ್ತೆ ಮೇಲುಗೈ ಸಾಧಿಸುತ್ತದೆಯೇ? ಕಾದು ನೋಡಬೇಕಿದೆ(ಏಜೆನ್ಸೀಸ್).