BMC Polls | ಅಂಬೇಡ್ಕರ್ ಮೊಮ್ಮಗನ ಕೈ ಹಿಡಿದ ಕಾಂಗ್ರೆಸ್
ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಾಂಗ್ರೆಸ್ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ್ ಆಘಾಡಿ ಮೈತ್ರಿ ಮಾಡಿಕೊಂಡಿವೆ. ಸೀಟು ಹಂಚಿಕೆ ಕೂಡ ಅಂತಿಮಗೊಳಿಸಿದ್ದು, ಎರಡೂ ಪಕ್ಷಗಳ ಹಿರಿಯ ನಾಯಕರ ನಡುವೆ ನಡೆದ ಮಾತುಕತೆಯ ಬಳಿಕ ಈ ಘೋಷಣೆ ಹೊರಬಿದ್ದಿದೆ.
ಬಿಎಂಸಿಯ ಒಟ್ಟು 227 ಸ್ಥಾನಗಳಲ್ಲಿ, ಕಾಂಗ್ರೆಸ್ 165, ವಿಬಿಎ 62 ರಲ್ಲಿ ಸ್ಪರ್ಧಿಸಲಿವೆ. ಕಾಂಗ್ರೆಸ್ ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಒಂದು ಭಾಗವಾಗಿದ್ದು, ಇದರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬಣವೂ ಸೇರಿವೆ. ಬಿಎಂಸಿ ಚುನಾವಣೆಗಾಗಿ, ಶಿವಸೇನೆ-ಯುಬಿಟಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜೊತೆ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಈ ನಡೆಯನ್ನು ನಿರಂತರವಾಗಿ ಟೀಕಿಸಿದೆ.
ಮಹಾಯುತಿ ಕಥೆ ಏನು..?
ಶಿಂಧೆ ಸೇನಾಗೆ ಫಡ್ನವೀಸ್ ಬೆಂಬಲ...
ಮಹಾಯುತಿಯಲ್ಲಿ ಅಸಮಾಧಾನವಿದೆ ಎನ್ನುವ ಸುದ್ದಿಗಳ ನಡುವೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಂತಹ ಊಹಾಪೋಹದ ಸುದ್ದಿಗಳನ್ನು ತಳ್ಳಿಹಾಕಿದ್ದು, ಶಿವಸೇನೆಗೆ ಬೆಂಬಲವಾಗಿ ನಿಂತಿದ್ದಾರೆ. ಶಿಂಧೆ ನೇತೃತ್ವದ ಶಿವಸೇನೆ ವಿರುದ್ಧ ಯಾವುದೇ ರೀತಿಯ ಟೀಕೆ, ಟಿಪ್ಪಣಿ ಮಾಡದಂತೆ ಕಟ್ಟಪ್ಪಣೆ ಹೊರಡಿಸಿರುವ ಸಿಎಂ, ಬಿಜೆಪಿ ಮತ್ತು ಶಿವಸೇನೆ ಒಗ್ಗಟ್ಟಾಗಿದೆ ಎನ್ನುವ ತಮ್ಮ ಮಾತನ್ನು ಪುನರುಚ್ಛರಿಸಿದ್ದು, ಮತ್ತೊಮ್ಮೆ ಮೈತ್ರಿಯನ್ನು ಸಾರ್ವಜನಿಕವಾಗಿ ಘೋಷಿಸುವ ಅಗತ್ಯವಿಲ್ಲ ಎಂದಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ಒಗ್ಗಟ್ಟಾಗಿವೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕಲು ಸ್ಪರ್ಧೆ
ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಫಡ್ನವೀಸ್, ಕೇಸರಿ ಪಕ್ಷವು ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಜನರಿಗಾಗಿ ಹೋರಾಡುತ್ತಿದೆ. ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕಲು ನಾವು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಪ್ರವೇಶಿಸಿದ್ದೇವೆ. ಜನವರಿ 16 ರಂದು ಬಿಎಂಸಿ ಮೇಲೆ ಮಹಾಯುತಿಯ ಕೇಸರಿ ಧ್ವಜವನ್ನು ಹಾರಿಸಬೇಕಾಗಿದೆ ಎಂದು ಹೇಳಿದರು.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಹಾಯುತಿಯ ಪ್ರಮುಖ ಪಾಲುದಾರರಾಗಿ ಮುಂದುವರೆಯುತ್ತಾರೆ ಎಂದಿರುವ ಫಡ್ನವೀಸ್, ಮೂರು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ಎಲ್ಲರ ಬಯಕೆ, ಆದರೆ ಕೆಲವೇ ಜನರಿಗೆ ಟಿಕೆಟ್ ನೀಡಲು ಸಾಧ್ಯ. ಟಿಕೆಟ್ ಸಿಗಲಿ ಅಥವಾ ಸಿಗದಿರಲಿ, ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡುವತ್ತ ಗಮನಹರಿಸಬೇಕು ಎಂದರು.
ಎಲ್ಲಾ ಪುರಸಭೆಗಳ ಜೊತೆಗೆ ಜನವರಿ 15 ರಂದು ಬಿಎಂಸಿಗೆ ಮತದಾನ ನಡೆಯಲಿದೆ. ಮರುದಿನ ಜನವರಿ 16 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).