Pradnya Satav Joins BJP | ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ನೀಡಿರುವ ಪ್ರಜ್ಞಾ ಸತವ್, ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಮಲ ಮುಡಿದರು. ಸತವ್ ಮರಾಠವಾಡ ಪ್ರದೇಶದ ಹಿಂಗೋಲಿ ಜಿಲ್ಲೆಯ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಸತವ್ ಕಾಂಗ್ರೆಸ್ ತೊರೆದಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಿಜೆಪಿ ಕಚೇರಿಗೆ ತೆರಳುವ ಮುನ್ನ ಸತವ್ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ, ಅದಾದ ಬಳಿಕ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಕ್ಷದ ಅಧ್ಯಕ್ಷ ರವೀಂದ್ರ ಚವಾಣ್ ಮತ್ತು ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ ಸತವ್, ತಮ್ಮ ಪ್ರದೇಶದ ಅಭಿವೃದ್ಧಿಗಾಗಿ ಮತ್ತು ತಮ್ಮ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷಾಂತರವಾಗಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯ ನಾಗಾಲೋಟ ಮುಂದುವರೆಸಿದ್ದು, ನಾನು ಈ ಅಭಿವೃದ್ಧಿಯ ಭಾಗವಾಗಲು ಬಯಸಿದ್ದೆ, ನನ್ನ ಕಾರ್ಯಕರ್ತರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಸೇರಲು ಅನೇಕ ನಾಯಕರು ತುದಿಗಾಲ ಮೇಲೆ ನಿಂತಿದ್ದು, ಅದಕ್ಕಾಗಿ ಸಮಯ ನೀಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ರಿಯಾಕ್ಷನ್..
ಪ್ರಜ್ಞಾ ಸತವ್ ನಿರ್ಧಾರ ದುರದೃಷ್ಟಕರ ಎಂದಿರುವ ಕಾಂಗ್ರೆಸ್ ನಾಯಕ ನಾನಾ ಪಟೋಲ್, ಪಕ್ಷಾಂತರದ ಹಿಂದಿನ ಆಕರ್ಷಣೆ ಏನೆಂದು ನನಗೆ ತಿಳಿದಿಲ್ಲ, ಮುಂದಿನ ವಾರ ನಮ್ಮ ಸಭೆಯಲ್ಲಿ ಈ ವಿಷಯದ ಕುರಿತಾಗಿ ಚರ್ಚಿಸುತ್ತೇವೆ. ಪ್ರತಿಯೊಂದು ಪಕ್ಷದಲ್ಲೂ ಒಳಜಗಳ ಸಾಮಾನ್ಯ, ಬಿಜೆಪಿ ಕೂಡ ಇದಕ್ಕೇನು ಹೊರತಾಗಿಲ್ಲ ಎಂದು ಹೇಳಿದರು.
ಸತಾವ್ ದಂಪತಿ ಹಿನ್ನಲೆ..
ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದ ರಾಜೀವ್ ಸತವ್ 2021 ರಲ್ಲಿ ಕೋವಿಡ್ ಸೋಂಕಿನಿಂದ ನಿಧನರಾದರು. ಕಾಂಗ್ರೆಸ್ ನಾಯಕ ಶರದ್ ರಾನ್ಪೈಸ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪ್ರಜ್ಞಾ ಸತವ್ 2021 ರಲ್ಲಿ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು. ರಾಜೀವ್ ಸತವ್ 2014 ರಿಂದ 2019 ರವರೆಗೆ ಹಿಂಗೋಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, 2019 ರ ಬಳಿಕ ಕಾಂಗ್ರೆಸ್ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶ ನೀಡಿತು. 2017 ರಲ್ಲಿ ಕಾಂಗ್ರೆಸ್ ಪಕ್ಷದ ಗುಜರಾತ್ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿ ಜವಾಬ್ದಾರಿ ತೆಗೆದುಕೊಂಡಿದ್ದರು. ರಾಜೀವ್ ಸತವ್ ಕಾಂಗ್ರೆಸ್ ಹೈ ಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು ಮತ್ತು ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಪ್ರಜ್ಞಾ ಸತವ್ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಆ ಬಳಿಕ 2024 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎರಡನೇ ಅವಧಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಅವರ ಅಧಿಕಾರಾವಧಿ 2030 ರವರೆಗೆ ಮಾನ್ಯವಾಗಿರುತ್ತದೆ(ಏಜೆನ್ಸೀಸ್).