AI video of PM | ಎಐ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್
ದೆಹಲಿ: ರಾಜಧಾನಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆಡಳಿತಪಕ್ಷ ಮತ್ತು ವಿಪಕ್ಷಗಳ ಮಧ್ಯದ ಕಾವು ಜೋರಾಗಿರುವ ನಡುವೆ ಕಾಂಗ್ರೆಸ್ ನಾಯಕಿ ಹಂಚಿಕೊಂಡಿರುವ ಎಐ ವಿಡಿಯೋ ಸದ್ಯ ರಾಜಕೀಯ ಕೆಸರೆರೆಚಾಟಕ್ಕೆ ವೇದಿಕೆ ನಿರ್ಮಿಸಿದೆ.
ಪ್ರಧಾನಿ ನರೇಂದ್ರ ಮೋದಿ ರೆಡ್ ಕಾರ್ಪೆಟ್ ಮೇಲೆ ಚಹಾ ಮಾರಾಟ ಮಾಡುತ್ತಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್, ಅಬ್ ಯೇ ಕೌನ್ ಕಿಯಾ (ಈಗ ಇದನ್ನು ಯಾರು ಮಾಡಿದರು?) ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಾದ ಬಳಿಕ ಈ ವಿವಾದ ಭುಗಿಲೆದ್ದಿದೆ.
ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ತಿಳಿ ನೀಲಿ ಬಣ್ಣದ ಕೋಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ, ರೆಡ್ ಕಾರ್ಪೆಟ್ ಮೇಲೆ ಕೆಟಲ್ ಮತ್ತು ಟೀ ಗ್ಲಾಸ್ ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಅದೇ ಸ್ಥಳದಲ್ಲಿ ತ್ರಿವರ್ಣ ಧ್ವಜ ಮತ್ತು ಇತರ ದೇಶಗಳ ಧ್ವಜವನ್ನು ಸಹ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರ ಧ್ವನಿಯನ್ನು ಅನುಕರಿಸುವ ಚಾಯ್ ಬೋಲೋ, ಚಾಯ್ಯೇ ಎಂಬ ಶಬ್ದ ಕೇಳುತ್ತಿದೆ.
ಬಿಜೆಪಿಯ ಪ್ರತಿಕ್ರಿಯೆ
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಈ ಎಐ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿಯವರ ಮೂಲವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪೂನಾವಾಲಾ, ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಸಂಸತ್ತು ಮತ್ತು ಸೇನೆಯನ್ನು ಅವಮಾನಿಸಿದ ಬಳಿಕ, ರಾಗಿಣಿ ನಾಯಕ್ ಈಗ ಪ್ರಧಾನಿ ಮೋದಿಯವರ ಚಾಯ್‌ವಾಲಾ ಹಿನ್ನೆಲೆಯ ಮೇಲೆ ದಾಳಿ ಮಾಡಿ ಅಪಹಾಸ್ಯ ಮಾಡುತ್ತಿದ್ದಾರೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಹಿಂದುಳಿದ ವರ್ಗದ ಕಾಮದಾರ್ ಪ್ರಧಾನಿಯನ್ನು ನಾಮ್‌ದಾರ್ ಕಾಂಗ್ರೆಸ್ ಸಹಿಸುವುದಿಲ್ಲ. ಅವರು ಈ ಹಿಂದೆಯೂ ಪ್ರಧಾನಿಗಳ ಹಿನ್ನೆಲೆಯನ್ನು ಅಣಕಿಸಿದ್ದರು. ಬಿಹಾರದಲ್ಲಿ ಅವರ ತಾಯಿಯನ್ನು ನಿಂದಿಸಿದರು. ಇಂತಹ ವರ್ತನೆಯಿಂದ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿಯವರ ಬಾಲ್ಯದ ವಿವಾದಗಳು..
ಕಾಂಗ್ರೆಸ್ ನಾಯಕಿಯ ಈ ಪೋಸ್ಟ್ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದು, ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಮತ್ತೆ ತೆರೆದಿಟ್ಟಿದೆ. ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮೋದಿ ಚಹಾ ಮಾರಾಟ ಮಾಡುತ್ತಿದ್ದರು ಎಂಬ ಹೇಳಿಕೆಯನ್ನು ಪ್ರಶ್ನಿಸಿದ್ದರು, ಅಹಮದಾಬಾದ್‌ನಲ್ಲಿ ನಡೆದ ಸಭೆಯೊಂದರಲ್ಲಿ, ಚಹಾ ಮಾರಾಟಗಾರರ ಸಂಘಗಳು ಮೋದಿ ಎಂದಿಗೂ ಚಹಾ ಮಾರಾಟಗಾರನಲ್ಲ, ಆದರೆ ಅವರು ಕ್ಯಾಂಟೀನ್ ಗುತ್ತಿಗೆದಾರರಾಗಿದ್ದರು ಎನ್ನುವುದನ್ನು ನಮಗೆ ತಿಳಿಸಿವೆ ಎಂದು ಹೇಳಿದ್ದರು.
ಬಿಜೆಪಿಯ ಚಾಯ್ ಪೆ ಚರ್ಚಾ ಕಾರ್ಯಕ್ರಮವನ್ನು ನಾಟಕ ಎಂದು ಕರೆದಿದ್ದ ಪಟೇಲ್, ಮೋದಿ ಚುನಾವಣೆಯ ಸಮಯದಲ್ಲಿ ಮಾತ್ರ ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು(ಏಜೆನ್ಸೀಸ್).