ನಾನಾ ಪಟೋಲೆ ವಿರುದ್ಧ ಬಿಜೆಪಿ ವಾಗ್ದಾಳಿ, ಕಾಂಗ್ರೆಸ್ ನಾಯಕನ ತಿರುಗೇಟು! (Nana Patole ಚಿತ್ರ X) 
ದೇಶ

ಪಾದಪೂಜೆ ಹೆಸರಲ್ಲಿ ಆಡಂಬರ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ, ರಾಮಮಂದಿರ ದೇಣಿಗೆ ಅಕ್ರಮ ಕೆದಕಿದ ಕೈ ನಾಯಕ! Nana Patole

ಮುಂಬೈ: ಗುರುಪೂರ್ಣಿಮೆಯ ದಿನದಂದು ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ (Nana Patole) ಅವರ ಪಾದ ತೊಳೆಯತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಈ ಘಟನೆಯನ್ನು ಬಿಜೆಪಿ "ಕಾಂಗ್ರೆಸ್ ಸಂಸ್ಕೃತಿ" ಎಂದು ವ್ಯಂಗ್ಯವಾಡಿದ್ದರೆ, ಪಟೋಲೆ ಅವರು ಇದನ್ನು ತಮ್ಮ 'ಕುಟುಂಬದ' ಸದಸ್ಯರ ಗೌರವದ ಸಂಕೇತ ಎಂದು ಸಮರ್ಥಿಸಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲೇನಿದೆ?

ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮಹಾರಾಷ್ಟ್ರ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾನಾ ಪಟೋಲೆ ಸೋಫಾ ಮೇಲೆ ಕುಳಿತಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಅವರ ಪಾದಗಳನ್ನು ನೀರಿನಿಂದ ತೊಳೆದು ಪಾದಗಳ ಮೇಲೆ ಹೂವನ್ನು ಸುರಿಸುತ್ತಿರುವುದನ್ನು ಕಾಣಬಹುದಾಗಿದೆ. ಆದಾಗ್ಯೂ, ಪಟೋಲೆ ಅವರ ಪಾದಗಳ ಬಳಿ ಕೆಲ ಹಣ್ಣುಗಳನ್ನು ಸಹ ಇಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಪಟೋಲೆ ವಿರುದ್ಧ ಬಿಜೆಪಿ ವಾಗ್ದಾಳಿ

ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ಸಚಿವ ಚಂದ್ರಶೇಖರ್ ಬಾವಂಕುಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇದು ಕಾಂಗ್ರೆಸ್ ನಾಯಕರ ಆಡಂಬರದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಘಟನೆಗಳು ಕೇವಲ ಟೀಕೆ ಮತ್ತು ನಕಾರಾತ್ಮಕ ಪ್ರಚಾರವನ್ನು ತರುತ್ತದೆ. ಕೇವಲ ನಕರಾತ್ಮಕತೆ ತಂದುಕೊಡುವ ಇಂತಹ ಆಚರಣೆಗಳಲ್ಲಿ ಭಾಗವಹಿಸುವ ಅಗತ್ಯವೇನಿತ್ತು? ಕಾಂಗ್ರೆಸ್​ ನಾಯಕರು ಇಂತಹ ಘಟನೆಗಳಿಂದ ಪಾಠ ಕಲಿಯಬೇಕು ಎಂದು ಕಿಡಿಕಾರಿದ್ದಾರೆ.

ನಾನಾ ಪಟೋಲೆ ಸಮರ್ಥನೆ ಮತ್ತು ತಿರುಗೇಟು

ವಿವಾದದ ಕುರಿತು ಸ್ಪಷ್ಟನೆ ನೀಡಿರುವ ನಾನಾ ಪಟೋಲೆ, "ನಾನು ಯಾರಿಗೂ ಈ ರೀತಿ ಮಾಡಲು ಒತ್ತಾಯಿಸಿಲ್ಲ. ಅಂದು ಗುರುಪೂರ್ಣಿಮೆ ಇತ್ತು. ನನ್ನ ಕುಟುಂಬದ ಇಬ್ಬರು ಕಿರಿಯ ಸದಸ್ಯರು ನನ್ನನ್ನು ಅವರ ಗುರು ಎಂದು ಭಾವಿಸಿ ಗೌರವಪೂರ್ವಕವಾಗಿ ಈ ಪೂಜೆ ಮಾಡಲು ಬಯಸಿದ್ದರು. ಹಾಗಾಗಿ ಅವರು ಪಾದಪೂಜೆ ಮಾಡಿದ್ದಾರೆ ಎಂದು ವಿವಾದವನ್ನು ತಳ್ಳಿಹಾಕಿದ್ದಾರೆ.
ಇದೇ ವೇಳೆ ಬಿಜೆಪಿಗೆ ತಿರುಗೇಟು ನೀಡಿದ ಅವರು, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಉಪದೇಶ ನೀಡುವ ಹಕ್ಕು ಬಿಜೆಪಿಗೆ ಇಲ್ಲ. ದೇವಸ್ಥಾನದ ದೇಣಿಗೆ ಹಣದಲ್ಲೇ ಅಕ್ರಮ ಎಸಗುವವರು ನಮಗೆ ನೀತಿ ಬೋಧಿಸಬೇಕಿಲ್ಲ, ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್​).