ಸೋನಿಯಾ ಗಾಂಧಿ ಆತ್ಮಕಥೆ ಆಧರಿಸಿ ತೆಲುಗು ಸಿನಿಮಾ WEB
ದೇಶ

ಸೋನಿಯಾ ಗಾಂಧಿ ಆತ್ಮಕಥೆ ಆಧರಿಸಿ ತೆಲುಗು ಸಿನಿಮಾ: ಕಾಂಗ್ರೆಸ್ ನಾಯಕ ಜಗ್ಗಾ ರೆಡ್ಡಿ ಘೋಷಣೆ! sonia gandhi Movie

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಏಳುಬೀಳುಗಳು, ರಾಜಕೀಯ ಪಯಣ ಹಾಗೂ ವೈಯಕ್ತಿಕ ಬದುಕಿನ ಸವಾಲುಗಳು ಇದೀಗ ಬೆಳ್ಳಿತೆರೆಯ ಮೇಲೆ ಮೂಡಿಬರಲಿವೆ. ಸೋನಿಯಾ ಗಾಂಧಿ ಅವರ ಆತ್ಮಕಥೆ 'Belonging: A Journey of Love' ಆಧರಿಸಿ ತೆಲುಗು ಭಾಷೆಯಲ್ಲಿ ಚಲನಚಿತ್ರ ನಿರ್ಮಿಸಲು ನಿರ್ಧರಿಸಲಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಗುರುವಾರ ಈ ಘೋಷಣೆ ಮಾಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆರ್ಥಿಕ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.sonia gandhi Movie

ಹೈದರಾಬಾದ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಏಳುಬೀಳುಗಳು, ರಾಜಕೀಯ ಪಯಣ ಹಾಗೂ ವೈಯಕ್ತಿಕ ಬದುಕಿನ ಸವಾಲುಗಳು ಇದೀಗ ಬೆಳ್ಳಿತೆರೆಯ ಮೇಲೆ ಮೂಡಿಬರಲಿವೆ. ಸೋನಿಯಾ ಗಾಂಧಿ ಅವರ ಆತ್ಮಕಥೆ 'Belonging: A Journey of Love' ಆಧರಿಸಿ ತೆಲುಗು ಭಾಷೆಯಲ್ಲಿ ಚಲನಚಿತ್ರ ನಿರ್ಮಿಸಲು ನಿರ್ಧರಿಸಲಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಗುರುವಾರ ಈ ಘೋಷಣೆ ಮಾಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆರ್ಥಿಕ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ತೆಲಂಗಾಣದ ಸಂಗಾರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜಗ್ಗಾ ರೆಡ್ಡಿ, ಸೋನಿಯಾ ಗಾಂಧಿ ಅವರ ಜೀವನ ಮತ್ತು ರಾಜಕೀಯ ಅನುಭವಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಂಗಾರೆಡ್ಡಿ ಕ್ಷೇತ್ರದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಚಿತ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

ಚಿತ್ರ ನಿರ್ಮಾಣಕ್ಕೆ 2 ಕೋಟಿ ನೆರವು

ಸಭೆಯಲ್ಲಿ ಕಾಂಗ್ರೆಸ್ ಕ್ಷೇತ್ರದ ಸಂಚಾಲಕ ಜುಲಕಂಟಿ ಅಂಜನೇಯುಲು ಅವರು ಚಿತ್ರ ನಿರ್ಮಾಣಕ್ಕಾಗಿ 2 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಸಿನಿಮಾ ನಿರ್ಮಾಣದ ಪ್ರಕ್ರಿಯೆ ಆರಂಭಿಸಲು 50 ಸದಸ್ಯರ ಸಮಿತಿ ರಚಿಸುವಂತೆ ಜಗ್ಗಾ ರೆಡ್ಡಿ ಸಲಹೆ ನೀಡಿದ್ದಾರೆ. ಗಾಂಧಿ ಭವನದ ಸಾರ್ವಜನಿಕ ಸಂಪರ್ಕಾಧಿಕಾರಿ ಹರಿಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹೇಗೆ ಹಣ ಸಂಗ್ರಹಿಸುತ್ತಾರೋ, ಅದೇ ರೀತಿಯಲ್ಲಿ ಸಿನಿಮಾ ನಿರ್ಮಾಣಕ್ಕೂ ಅಗತ್ಯವಿರುವ ಹಣವನ್ನು ಒಟ್ಟುಗೂಡಿಸಬೇಕು ಎಂದು ಜಗ್ಗಾ ರೆಡ್ಡಿ ಹೇಳಿದ್ದಾರೆ. ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡಿ, ಸೂಕ್ತ ಬಜೆಟ್ ಸಿದ್ಧಪಡಿಸುವಂತೆಯೂ ಸೂಚಿಸಿದ್ದಾರೆ.

ಚಿತ್ರದ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸಿ ಚಿತ್ರೀಕರಣಕ್ಕೆ ಚಾಲನೆ ನೀಡುವ ಯೋಜನೆಯಿದೆ ಎಂದು ತಿಳಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಕಥೆಯ ಪ್ರತಿಗಳನ್ನು ಖರೀದಿಸಿ ಪಕ್ಷದ ಕಾರ್ಯಕರ್ತರಿಗೆ ವಿತರಿಸುವುದಾಗಿಯೂ ಅವರು ಹೇಳಿದ್ದಾರೆ.

ಇದನ್ನೂ ಓದಿ : ಅತ್ಯಾಚಾರ ಕೇಸ್ ಹಿಂಪಡೆಯಲು ಒತ್ತಡ: ಮಹಡಿಯಿಂದ ಬಿದ್ದು ಮಹಿಳೆ ಸ್ಥಿತಿ ಗಂಭೀರ, ಓರ್ವ ಅರೆಸ್ಟ್! Bihar Gang Rape

ಇಂದಿರಾ ಗಾಂಧಿ ಸೊಸೆಯಿಂದ ಕಾಂಗ್ರೆಸ್ ನಾಯಕಿಯವರೆಗಿನ ಪಯಣ

ಸೋನಿಯಾ ಗಾಂಧಿ ಅವರ ಬದುಕಿನ ವಿವಿಧ ಹಂತಗಳನ್ನು ಸಿನಿಮಾ ಒಳಗೊಂಡಿರಲಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೊಸೆಯಾಗಿ, ರಾಜೀವ್ ಗಾಂಧಿ ಅವರ ಪತ್ನಿಯಾಗಿ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ತಾಯಿಯಾಗಿ ಅವರು ಎದುರಿಸಿದ ಅನುಭವಗಳನ್ನು ಚಿತ್ರದಲ್ಲಿ ತೋರಿಸಲು ಉದ್ದೇಶಿಸಲಾಗಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಕುಟುಂಬ ಎದುರಿಸಿದ ಆಘಾತ, ಸೋನಿಯಾ ಗಾಂಧಿ ಅನುಭವಿಸಿದ ಸಂಕಷ್ಟಗಳು, ಇಬ್ಬರು ಮಕ್ಕಳನ್ನು ಬೆಳೆಸಿದ ರೀತಿ ಹಾಗೂ ನಂತರದ ರಾಜಕೀಯ ಜೀವನದ ಹಾದಿಯನ್ನು ಸಿನಿಮಾ ತೆರೆದಿಡಲಿದೆ ಎಂದು ಜಗ್ಗಾ ರೆಡ್ಡಿ ತಿಳಿಸಿದ್ದಾರೆ.

ಭಾರತದಂತಹ ವಿವಿಧ ಧರ್ಮ, ಜಾತಿ ಮತ್ತು ಭಾಷೆಗಳಿರುವ ದೇಶದಲ್ಲಿ ಸೋನಿಯಾ ಗಾಂಧಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ವ್ಯವಸ್ಥೆಯನ್ನು ಆಳವಾಗಿ ಅರಿತುಕೊಂಡು ಯಶಸ್ವಿ ರಾಜಕೀಯ ಜೀವನ ರೂಪಿಸಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಹುದ್ದೆಯ ಅವಕಾಶವನ್ನೇ ತಿರಸ್ಕರಿಸಿದ್ದ ಸೋನಿಯಾ

ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಹುದ್ದೆಯ ಬಗ್ಗೆ ಯಾವುದೇ ವಿಶೇಷ ಆಸಕ್ತಿ ಇರಲಿಲ್ಲ ಎಂದು ಜಗ್ಗಾ ರೆಡ್ಡಿ ಹೇಳಿದ್ದಾರೆ. ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಪಿ.ವಿ. ನರಸಿಂಹರಾವ್ ಪ್ರಧಾನಿಯಾದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಆ ಹುದ್ದೆಯ ಬಗ್ಗೆ ಆಸಕ್ತಿ ತೋರಿರಲಿಲ್ಲ ಎಂದು ಅವರು ಸ್ಮರಿಸಿದ್ದಾರೆ. ನಂತರ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಪ್ರಧಾನಿಯಾಗಬೇಕೆಂದು ಒತ್ತಾಯಿಸಿದ್ದರು. ಆದರೆ ಅವರು ಆ ಅವಕಾಶವನ್ನು ನಿರಾಕರಿಸಿ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಹುದ್ದೆ ವಹಿಸಿಕೊಟ್ಟಿದ್ದರು ಎಂದು ಜಗ್ಗಾ ರೆಡ್ಡಿ ನೆನಪಿಸಿಕೊಂಡಿದ್ದಾರೆ. ಈ ನಿರ್ಧಾರವನ್ನು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವೆಂದು ಅವರು ಬಣ್ಣಿಸಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ರೂಪುಗೊಳ್ಳುವಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರ ಆಲೋಚನೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದೂ ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ ಆಸೆ

ಗಾಂಧಿ ಕುಟುಂಬದಿಂದ ಮತ್ತೊಮ್ಮೆ ದೇಶಕ್ಕೆ ಪ್ರಧಾನಮಂತ್ರಿ ಬರಬೇಕೆಂದು ಜನರು ಬಯಸುತ್ತಿದ್ದಾರೆ ಎಂದು ಜಗ್ಗಾ ರೆಡ್ಡಿ ಹೇಳಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂಬುದು ಸೋನಿಯಾ ಗಾಂಧಿ ಅವರ ಆಶಯವಾಗಿದೆ ಎಂದೂ ಅವರು ತಿಳಿಸಿದ್ದಾರೆ. ಸದ್ಯ ಈ ಚಿತ್ರದ ನಿರ್ದೇಶಕರು, ಕಲಾವಿದರು, ನಿರ್ಮಾಣ ಸಂಸ್ಥೆ ಹಾಗೂ ಚಿತ್ರೀಕರಣದ ದಿನಾಂಕದ ಕುರಿತು ಅಧಿಕೃತ ವಿವರಗಳು ಪ್ರಕಟವಾಗಿಲ್ಲ. ಸೋನಿಯಾ ಗಾಂಧಿ ಅವರ ಆತ್ಮಕಥೆಯನ್ನು ಆಧರಿಸಿದ ಈ ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಯಾವ ರೀತಿಯಲ್ಲಿ ಮೂಡಿಬರಲಿದೆ ಎಂಬ ಕುತೂಹಲ ಮೂಡಿದೆ, (ಏಜೆನ್ಸೀಸ್​).