ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ತೊರೆದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸುವಂತೆ ದೇಶದ ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಅವರೇ ತಮಗೆ ಸಲಹೆ ನೀಡಿದ್ದರು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ (ನವೆಂಬರ್ 24) ಕೋಲ್ಕತ್ತಾದಲ್ಲಿ ನಡೆದ ದಿ ಎಕನಾಮಿಕ್ ಟೈಮ್ಸ್ ಬೆಂಗಾಲ್ ಅಸೆಂಡ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಅವರೊಂದಿಗೆ ನಡೆದಿದ್ದ ಮಾತುಕತೆಯನ್ನು ಸ್ಮರಿಸಿಕೊಂಡಿದ್ದಾರೆ.
ಪ್ರಣಬ್ ಮುಖರ್ಜಿ ಅವರನ್ನು ತಮ್ಮ ಮೂಲ ಸಲಹೆಗಾರ ಎಂದು ಬಣ್ಣಿಸಿದ ಸುವೇಂದು ಅಧಿಕಾರಿ, ಮುಖರ್ಜಿ ಅವರು ರಾಷ್ಟ್ರಪತಿಯಾದ ಬಳಿಕ ತಾವು ರೈಸಿನಾ ಹಿಲ್ಗೆ (ರಾಷ್ಟ್ರಪತಿ ಭವನಕ್ಕೆ) ಭೇಟಿ ನೀಡಿದ್ದಾಗ ಈ ಮಾತುಕತೆ ನಡೆದಿತ್ತು ಎಂದು ತಿಳಿಸಿದ್ದಾರೆ. ನೀನು ಏನು ಮಾಡಲು ಬಯಸುತ್ತೀಯ ಎಂಬುದರ ಬಗ್ಗೆ ಯೋಚಿಸು. ನೀನು ಕೇವಲ ಒಬ್ಬ ನೌಕರನಾಗಿ ಉಳಿಯಲು ಬಯಸಿದರೆ ಅಲ್ಲೇ ಇರು. ಆದರೆ ನಿನ್ನ ಸ್ವಂತ ಶಕ್ತಿಯ ಮೇಲೆ ಮುಂದೆ ಸಾಗಲು ಬಯಸಿದರೆ ಮೋದಿಜಿಯವರೊಂದಿಗೆ ಇರು ಎಂದು ಪ್ರಣಬ್ ಜಿ ನನಗೆ ಹೇಳಿದ್ದರು ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ಅಂದಿನ ಟಿಎಂಸಿ ಪಕ್ಷದ ಆಂತರಿಕ ಕಾರ್ಯವೈಖರಿಯ ಬಗ್ಗೆ ಪ್ರಣಬ್ ಮುಖರ್ಜಿ ನೀಡಿದ್ದ ವಿಶ್ಲೇಷಣೆಯನ್ನೂ ಸುವೇಂದು ಅಧಿಕಾರಿ ಉಲ್ಲೇಖಿಸಿದ್ದಾರೆ. ಅವರದ್ದು ಒಬ್ಬ ವ್ಯಕ್ತಿಯ ಪಕ್ಷ, ಅತ್ತೆ-ಅಳಿಯನ ಪಕ್ಷವಾಗಿತ್ತು. ಅದು ಸಂಪೂರ್ಣವಾಗಿ ಒಬ್ಬ ಮ್ಯಾನೇಜಿಂಗ್ ಚೇರ್ಮನ್ ಮತ್ತು ಒಬ್ಬ ಮ್ಯಾನೇಜಿಂಗ್ ಡೈರೆಕ್ಟರ್ ಇರುವ ಕಂಪನಿಯಂತಿತ್ತು ಎಂದು ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಅಧಿಕಾರಿ ಟೀಕಿಸಿದ್ದಾರೆ. ನಾನೂ ಅಲ್ಲಿದ್ದೆ, ಆದರೆ ನೌಕರನಾಗಿ ಉಳಿಯಲು ನನಗೆ ಇಷ್ಟವಿರಲಿಲ್ಲ, ಹಾಗಾಗಿ ಪಕ್ಷ ತೊರೆದೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಈ ಮಾತುಕತೆ ಯಾವಾಗ ನಡೆಯಿತು ಎಂಬ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಲು ನಿರಾಕರಿಸಿದ ಸುವೇಂದು ಅಧಿಕಾರಿ, ನಾನು ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಅವರು ಇಂದು ನಮ್ಮೊಂದಿಗಿಲ್ಲ. ಇದರಿಂದ ಅನಗತ್ಯ ವಿವಾದ ಸೃಷ್ಟಿಯಾಗಬಹುದು. ರಾಜಕೀಯವನ್ನು ಹೊರತುಪಡಿಸಿ ಪ್ರತಿಯೊಬ್ಬ ಭಾರತೀಯನೂ ಪ್ರಣಬ್ ಮುಖರ್ಜಿ ಅವರನ್ನು ಗೌರವಿಸುತ್ತಾನೆ ಎಂದು ಸಿಎಂ ಸುವೇಂಧು ಹೇಳಿದ್ದಾರೆ.
2020ರ ಆಗಸ್ಟ್ನಲ್ಲಿ ಪ್ರಣಬ್ ಮುಖರ್ಜಿ ನಿಧನರಾದ ಕೆಲವೇ ತಿಂಗಳುಗಳ ಬಳಿಕ, ಅಂದರೆ ಡಿಸೆಂಬರ್ 2020ರಲ್ಲಿ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 294 ಸ್ಥಾನಗಳ ಪೈಕಿ 207 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ಸಾಧಿಸಿದ ಬಳಿಕ, ಸುವೇಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವರು ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪರಾಭವಗೊಳಿಸಿದ್ದರು. ಟಿಎಂಸಿ ಈ ದೊಡ್ಡ ಸೋಲಿನ ಬಳಿಕ ಮದನ್ ಮಿತ್ರಾ ಮತ್ತು ರವೀಂದ್ರನಾಥ್ ಘೋಷ್ ಅವರಂತಹ ಟಿಎಂಸಿಯ ಹಲವು ಹಿರಿಯ ನಾಯಕರು ಸಹ ಅಭಿಷೇಕ್ ಬ್ಯಾನರ್ಜಿ ಅವರ ಪ್ರಾಬಲ್ಯದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಜೀವಮಾನವಿಡೀ ಕಾಂಗ್ರೆಸ್ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಅವರು ಬಿಜೆಪಿ ಮತ್ತು ಆರ್ಎಸ್ಎಸ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂಬುದು ಗಮನಾರ್ಹ. 2018ರಲ್ಲಿ ನಾಗ್ಪುರದ ಆರ್ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಅವರು, ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಅವರನ್ನು ಭಾರತ ಮಾತೆಯ ಮಹಾನ್ ಪುತ್ರ ಎಂದು ಬಣ್ಣಿಸಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲಿನಿಂದಲೂ ಪ್ರಣಬ್ ಮುಖರ್ಜಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು ಎಂದು ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು(ಏಜೆನ್ಸೀಸ್).